'ರೋಹಿತ್ ಶೆಟ್ಟಿ ಈ ವಿಷಯದಲ್ಲಿ ಸಿನೆಮಾ ಮಾಡಬಹುದು': ಎಸ್‌ಪಿ ವಿರುದ್ಧ ಕಿಡಿಕಾರಿದ ಗುವಾಹಟಿ ಹೈಕೋರ್ಟ್

ಅಸ್ಸಾಂ ಬುಲ್ಡೋಜರ್ ಕಾರ್ಯಾಚರಣೆ

Update: 2022-11-18 14:54 GMT

ಗುವಾಹಟಿ, ನ.18: ಕೆಲವು ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಕಾರ್ಯಾಚರಣೆಯ ಮೂಲಕ ಧ್ವಂಸಗೊಳಿಸಿದ ಅಸ್ಸಾಮಿನ ನಾಗಾಂವ್ ಜಿಲ್ಲಾ ಎಸ್‌ಪಿಯ ಕ್ರಮವನ್ನು ಗುವಾಹಟಿ ಉಚ್ಚ ನ್ಯಾಯಾಲಯವು ಸಂಭಾವ್ಯ ಬಾಲಿವುಡ್ ಚಿತ್ರಕ್ಕೆ ಹೋಲಿಸಿದೆ.

ಗುರುವಾರ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಾಧೀಶ ಆರ್.ಎಂ.ಛಾಯಾ ಅವರು,‘ಆ ವರ್ಗದ ಹಿಂದಿ ಸಿನಿಮಾವನ್ನು ನಾನು ನೋಡಿಲ್ಲ. ಎಸ್‌ಪಿಯ ಕಥೆಯನ್ನು ರೋಹಿತ್ ಶೆಟ್ಟಿಗೆ ಕಳುಹಿಸಿ. ಅವರು ಅದರ ಮೇಲೆ ಸಿನಿಮಾ ಮಾಡಬಹುದು’ ಎಂದು ಲಘುಧಾಟಿಯಲ್ಲಿ ಹೇಳಿದರು.

ಈ ವರ್ಷದ ಮೇ 21ರಂದು ಪೊಲೀಸ್ ಕಸ್ಟಡಿಯಲ್ಲಿ ಮೀನು ವ್ಯಾಪಾರಿ ಸಿಫಿಕುಲ್ ಇಸ್ಲಾಮ್ ಸಾವಿನ  ವಿರುದ್ಧ ಪ್ರತಿಭಟನೆಗಿಳಿದಿದ್ದ ಕೆಲವರು ನಾಗಾಂವ್ ಜಿಲ್ಲೆಯ ಬಟದ್ರವಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು ಮತ್ತು ಸಿಬ್ಬಂದಿಗಳನ್ನು ಥಳಿಸಿದ್ದರು. ಮರುದಿನ ಪೊಲೀಸರು ಬುಲ್ಡೋಜರ್‌ಗಳನ್ನು ಬಳಸಿ ಐವರು ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಿದ್ದರು. ಘಟನೆಯ ಕುರಿತು ಇಬ್ಬರು ವಕೀಲರು ಸ್ವೀಕರಿಸಿದ್ದ ಪತ್ರದ ಆಧಾರದಲ್ಲಿ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಯಾರೂ ಸುರಕ್ಷಿತರಾಗಿಲ್ಲ.ತನಿಖೆಯ ಸೋಗಿನಲ್ಲಿ ನೀವು ಯಾರದೋ ಮನೆಯನ್ನು ಕೆಡವುತ್ತೀರಿ. ಲಾರ್ಡ್ ಮೆಕಾಲೆ ಕೂಡ ಇಂತಹುದನ್ನು ಯೋಚಿಸಿರಲಿಕ್ಕಿಲ್ಲ. ಇದು ಕ್ರಿಮಿನಲ್ ಕಾನೂನಿಗೆ ಕುಂದನ್ನುಂಟು ಮಾಡಿದೆ ಎಂದು ಹೇಳಿದ ನ್ಯಾ.ಛಾಯಾ,ತನಿಖಾ ಸಂಸ್ಥೆಯಿಂದ ಅತ್ಯಂತ ಗಂಭೀರ ಪ್ರಕರಣದ ತನಿಖೆಯಲ್ಲಿಯೂ ಮನೆಯನ್ನು ನೆಲಸಮಗೊಳಿಸುವುದಕ್ಕೆ ಯಾವುದೇ ಕ್ರಿಮಿನಲ್ ಕಾನೂನಿನಡಿ ಅವಕಾಶವಿಲ್ಲ ಎಂದರು.
ಎಸ್‌ಪಿಯ ವರದಿಯಂತೆ ಪೊಲೀಸ್ ತಂಡದಿಂದ ಸಂಪೂರ್ಣ ಶೋಧ ಕಾರ್ಯಾಚರಣೆಯಲ್ಲಿ ಮನೆಯನ್ನು ಅಗೆಯಲು ಬುಲ್ಡೋಜರ್ ಅಗತ್ಯವಾಗಿತ್ತು. ಆದರೆ ಅದಕ್ಕೆ ಅನುಮತಿ ಬೇಕು. ಇಲ್ಲೇನೋ ಇದೆ ಎಂದು ನೀವು ನಾಳೆ ಹೇಳಬಹುದು. ಹಾಗಿದ್ದರೆ ನನ್ನ ನ್ಯಾಯಾಲಯ ಕೊಠಡಿಯನ್ನು ನೀವು ಅಗೆಯುತ್ತೀರಾ? ನೀವು ಹೇಗೆ ಅದನ್ನು ಮಾಡುತ್ತೀರಿ? ನೀವು ಯಾರೇ ಆಗಿರಬಹುದು ಎಂದು ಕುಟುಕಿದರು.

ಅವರು ಯಾವುದೇ ಜಿಲ್ಲೆಯ ಎಸ್‌ಪಿ ಆಗಿರಬಹುದು. ಡಿಐಜಿ,ಐಜಿ ಅಥವಾ ಡಿಜಿ ಕೂಡ ಕಾನೂನಿಗೆ ಅನುಗುಣವಾಗಿಯೇ ನಡೆದುಕೊಳ್ಳಬೇಕು. ನೀವು ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿದ್ದೀರಿ ಎಂಬ ಮಾತ್ರಕ್ಕೆ ನೀವು ಯಾರದೇ ಮನೆಯನ್ನು ಕೆಡವುವಂತಿಲ್ಲ. ಇದಕ್ಕೆ ಅನುಮತಿ  ನೀಡಿದರೆ ಈ ದೇಶದಲ್ಲಿ ಯಾರೂ ಸುರಕ್ಷಿತರಾಗಿರುವುದಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಾಧೀಶರು,ನಾಳೆ ಯಾರಾದರೂ ಬಲವಂತದಿಂದ ನ್ಯಾಯಾಲಯಕ್ಕೆ ನುಗ್ಗಿ ಕುಳಿತುಕೊಳ್ಳಬಹುದು. ತನಿಖೆಯ ನೆಪದಲ್ಲಿ ಪೊಲೀಸ್ ಅಧಿಕಾರಿಗಳು ಆತ ಕುಳಿತಿದ್ದ ಕುರ್ಚಿಯನ್ನು ತೆಗೆಯುತ್ತಾರಾ? ಆತ ಮಾಡಿದ ಅಪರಾಧಕ್ಕಾಗಿ ಆತನ ವಿರುದ್ಧ ನೀವು ಕಾನೂನು ಕ್ರಮ ಜರುಗಿಸಬಹುದು. ಮನೆಯ ಮೇಲೆ ಬುಲ್ಡೋಜರ್ ಚಲಾಯಿಸಲು ಎಸ್‌ಪಿಗೆ ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿದರು.
ಕಾರ್ಯವಿಧಾನವನ್ನು ಅನುಸರಿಸಬೇಕು ಎಂದು ಒತ್ತಿ ಹೇಳಿದ ಅವರು,ಗುವಾಹಟಿಯ ವಕೀಲರ ಸಂಘದಲ್ಲಿಯ ತನ್ನ ಸೀಮಿತ ವೃತ್ತಿಜೀವನದಲ್ಲಿ ಸರ್ಚ್ ವಾರಂಟ್ ಮೂಲಕ ಬುಲ್ಡೋಜರ್ ಬಳಸಿದ್ದ ಯಾವುದೇ ಪೊಲೀಸ್ ಅಧಿಕಾರಿಯನ್ನು ತಾನು ಕಂಡಿರಲಿಲ್ಲ ಎಂದರು.

ಇದು ಗ್ಯಾಂಗ್ ವಾರ್ ಅಥವಾ ಪೊಲೀಸ್ ಕಾರ್ಯಾಚರಣೆಯೇ? ಗ್ಯಾಂಗ್ ವಾರ್‌ನಲ್ಲಿ ಇಂತಹುದು ಸಂಭವಿಸಿದರೆ ಯಾರೂ ಅರ್ಥ ಮಾಡಿಕೊಳ್ಳಬಹುದು. ‘ಕಾನೂನು’ ಮತ್ತು  ‘ಸುವ್ಯವಸ್ಥೆ ’ಶಬ್ದಗಳನ್ನು ಒಂದು ಉದ್ದೇಶದೊಂದಿಗೆ ಬಳಸಲಾಗುತ್ತದೆ ಎಂದು ಒತ್ತಿ ಹೇಳಿದ ಮುಖ್ಯ ನ್ಯಾಯಾಧೀಶರು,ಘಟನೆಯನ್ನು ಗೃಹ ಸಚಿವಾಲಯದ ಉನ್ನತಾಧಿಕಾರಿಗಳ ಗಮನಕ್ಕೆ ತರುವಂತೆ ಆದೇಶಿಸಿದರು. ಡಿಜಿಪಿಗೂ ಈ ಬಗ್ಗೆ ಗೊತ್ತಿಲ್ಲದಿರಬಹುದು ಎಂದರು. 

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನಿಮಗೆ ಸಿಕ್ಕಿದ್ದು ಒಂದು 9 ಎಂಎಂ ಪಿಸ್ತೂಲು. ಅದನ್ನು ಅಲ್ಲಿ ಇಡಲಾಗಿತ್ತೇ ಅಥವಾ ಅದು ನಿಜಕ್ಕೂ ಅಲ್ಲಿ ದೊರಕಿತ್ತೇ ಎನ್ನುವುದು ನಮಗೆ ಗೊತ್ತಿಲ್ಲ. ಅಪರಾಧವೊಂದರ ತನಿಖೆಗಾಗಿ ಪೊಲೀಸರು ಯಾವುದೇ ಆದೇಶವಿಲ್ಲದೆ ಬುಲ್ಡೋಜರ್ ಬಳಸಿ ಓರ್ವ ವ್ಯಕ್ತಿಯನ್ನು ಬುಡಮೇಲುಗೊಳಿಸಬಹುದು ಎಂದು ಯಾವುದೇ ಅಪರಾಧ ನ್ಯಾಯಶಾಸ್ತ್ರದಲ್ಲಿ ಹೇಳಿದ್ದರೆ ನನಗೆ ತೋರಿಸಿ

ಮುಖ್ಯ ನ್ಯಾಯಾಧೀಶೆ ಆರ್.ಎಂ.ಛಾಯಾ

Similar News