ಜನಸಂಖ್ಯಾ ನಿಯಂತ್ರಣಕ್ಕೆ ಎರಡು ಮಕ್ಕಳ ನೀತಿ ಜಾರಿ ಕೋರುವ ಅರ್ಜಿ ತಿರಸ್ಕರಿಸಿದ ಸುಪ್ರೀಂ

Update: 2022-11-18 15:53 GMT

ಹೊಸದಿಲ್ಲಿ,ನ.18: ಎರಡು ಮಕ್ಕಳ ನೀತಿಯ  ಕಡ್ಡಾಯ ಜಾರಿ ಸೇರಿದಂತೆ ಹೆಚ್ಚುತ್ತಿರುವ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ಗುಚ್ಛವನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್  ಶುಕ್ರವಾರ  ನಿರಾಕರಿಸಿದೆ.

ಜನನ ಪ್ರಮಾಣದಲ್ಲಿ ಹೆಚ್ಚಳದ ಹೊರತಾಗಿಯೂ ಭಾರತದ ಜನಸಂಖೆಯು ಸ್ಥಿರತೆಯತ್ತ ಸಾಗುತ್ತಿದೆಯೆಂಬ ಮಾಧ್ಯಮವರದಿಗಳನ್ನು  ಉಲ್ಲೇಖಿಸಿದ ಸುಪ್ರೀಂಕೋರ್ಟ್, ಇದು ನ್ಯಾಯಾಲಯವು ಮಧ್ಯಪ್ರವೇಶಿಸಬಹುದಾದಂತಹ ವಿಷಯವಲ್ಲವೆಂದು   ಹೇಳಿದೆ.
‘‘ಜನಸಂಖ್ಯಾ ಹೆಚ್ಚಳವು ಒಂದೇ ದಿನದಲ್ಲಿ  ನಿಲ್ಲಿಸಬಹುದಾದಂತಹ ವಿಷಯವಲ್ಲ’’ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಎ.ಎಸ್. ಓಕಾ ಅವರನ್ನೊಳಗೊಂಡ ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯಿಸಿತು.

ಜನಸಂಖ್ಯಾ ಹೆಚ್ಚಳವನ್ನು ನಿಯಂತ್ರಿಸಲು ಎರಡು ಮಕ್ಕಳ ನೀತಿ ಸೇರಿದೆಂತೆ ಕೆಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ತಾನು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.

ಆದರೆ ಈ ಅರ್ಜಿಯನ್ನು ಆಲಿಸಲು ತಾನು  ಇಚ್ಛಿಸುವುದಿಲ್ಲವೆದು ಸುಪ್ರೀಂಕೋರ್ಟ್ ತಿಳಿಸಿದ ಬಳಿಕ ಅವರು ಅರ್ಜಿಯನ್ನು ಹಿಂತೆಗೆದುಕೊಂಡಿದ್ದಾರೆ. ಅಲ್ಲದೆ ಈ ವಿಷಯವಾಗಿ ಸಲ್ಲಿಸಲಾದ ಇತರ ಕೆಲವು ಅರ್ಜಿಗಳನ್ನು ಕೂಡಾ ವಿಚಾರಣೆಗೆ ಸ್ವೀಕರಿಸಲು ನ್ಯಾಯಪೀಠ ನಿರಾಕರಿಸಿದೆ.

Similar News