ಭಾರತ್‌ ಜೋಡೊ: ರಾಹುಲ್ ಜೊತೆ ಹೆಜ್ಜೆಹಾಕಿದ ತುಷಾರ್ ಗಾಂಧಿ

ಮಹಾತ್ಮಾ ಗಾಂಧೀಜಿಯ ಮರಿಮೊಮ್ಮಗನ ಪಾಲ್ಗೊಳ್ಳುವಿಕೆ ‘ಐತಿಹಾಸಿಕ’ ಎಂದ ಕಾಂಗ್ರೆಸ್

Update: 2022-11-18 16:32 GMT

ಶೆಗಾಂವ್, ನ.18:  ಭಾರತ್ ಜೋಡೊ ಯಾತ್ರೆ ಶುಕ್ರವಾರ  ಮಹಾರಾಷ್ಟ್ರದ ಬುಲ್ದಾನಾ  ಜಿಲ್ಲೆಯನ್ನು ತಲುಪಿದ್ದು  ಮಹಾತ್ಮಾಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿ ನಡೆದರು. ಭಾರತ್ ಜೊಡೊ ಯಾತ್ರೆಯಲ್ಲಿ ತುಷಾರ್ಗಾಂಧೀಜಿಯವರ ಪಾಲ್ಗೊಳ್ಳುವಿಕೆ ‘ಐತಿಹಾಸಿಕ’ವೆಂದು ಕಾಂಗ್ರೆಸ್ ಪಕ್ಷ ಬಣ್ಣಿಸಿದೆ.

ನವೆಂಬರ್ 7ರಿಂದ ಭಾರತ್ ಜೊಡೊ ಯಾತ್ರೆ ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿದ್ದು   ಇಂದು ಮುಂಜಾನೆ 6 ಗಂಟೆಗೆ ಅಕೋಲಾ ಜಿಲ್ಲೆಯ ಬಲಾಪುರ ಗ್ರಾಮದಿಂದ ದಿನದ ಪ್ರಯಾಣವನ್ನು ಆರಂಭಿಸಿತ್ತು. ಕೆಲವು ತಾಸುಗಳ ಬಳಿಕ ಅದು ಶೆಗಾಂವ್ ಪಟ್ಟಣವನ್ನು ತಲುಪಿದ್ದು, ಅಲ್ಲಿ ಖ್ಯಾತ ಲೇಖಕ ಹಾಗೂ ಸಾಹಿತಿ ತುಷಾರ್ಗಾಂಧಿ ಜೊತೆಗೂಡಿದರು.

ಇದಕ್ಕೂ ಮುನ್ನ ಯಾತ್ರೆಯಲ್ಲಿ ಪಾಲ್ಗೊಳ್ಳಲು ತಾನು ನಿರ್ಧರಿಸಿರುವ  ಬಗ್ಗೆ ಟ್ವೀಟ್ ಮಾಡಿದ್ದ ತುಷಾರ್ಗಾಂಧಿ,  ಶೆಗಾಂವ್ ತನ್ನ ಜನ್ಮಸ್ಥಳ ಎಂದು ತಿಳಿಸಿದ್ದರು.
‘‘ಶೆಗಾಂವ್ ನನ್ನ ಜನ್ಮಸ್ಥಳವೂ ಹೌದು. 1960ರ ಜನವರಿ 17ರಂದು  ನನ್ನ ತಾಯಿ, ನಾಗಪುರ ಮೂಲಕ ಸಾಗುವ ಹೌರಾ ರೈಲು 1960ರ ಜನವರಿಯಲ್ಲಿ ಶೆಗಾಂವ್ ರೈಲು ನಿಲ್ದಾಣದಲ್ಲಿ ನಿಂತಿದ್ದಾಗ ನನಗೆ ಜನ್ಮನೀಡಿದ್ದಳು’’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

‘‘ರಾಹುಲ್ ಗಾಂಧಿ ಹಾಗೂ ತುಷಾರ್ ಗಾಂಧಿ ಕ್ರಮವಾಗಿ ಜವಾಹರಲಾಲ್ ನೆಹರೂ ಹಾಗೂ ಮಹಾತ್ಮಾ ಗಾಂಧೀಜಿಯವರ ಮರಿಮೊಮ್ಮಕ್ಕಳಾಗಿದ್ದು, ಈ ಇಬ್ಬರು ದಿವಂಗತ ಮಹಾನ್ ನಾಯಕರ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ ’’ಎಂದು ಅದು ಹೇಳಿದೆ.

ತುಷಾರ್ ಗಾಂಧಿ ಅವರಲ್ಲದೆ, ಹಿರಿಯ ಕಾಂಗ್ರೆಸ್ ನಾಯಕರಾದ  ಮುಕುಲ್ ವಾಸ್ನಿಕ್, ದೀಪೆಂದರ್ ಹೂಡಾ, ಮಿಲಿಂದ್ ದಿಯೊರಾ, ಮಾಣಿಕ್ ರಾವ್‌ ಠಾಕ್ರೆ,ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯಿ ಜಗತಾಪ್ ಹಾಗೂ ಪಕ್ಷದ ರಾಜ್ಯಘಟದ ವರಿಷ್ಠ ನಾನಾ ಪಟೋಲೆ ಅವರು ಕೂಡಾ ರಾಹುಲ್ ಜೊತೆ ಹೆಜ್ಡೆಹಾಕಿದರು.

ಶುಕ್ರವಾರ ಸಂಜೆ  ರಾಹುಲ್ ಅವರು  ಶೆಗಾಂವ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆ ಅಂತಿಮ ಹಂತಕ್ಕೆ ಕಾಲಿಟ್ಟಿದ್ದು, ನವೆಂಬರ್ 20ರಂದು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ.

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಶುಕ್ರವಾರ  ರಾಹುಲ್ ಗಾಂಧಿ ನೇತೃತ್ವದ  ‘ಭಾರತ್  ಜೊಡೊ’ ಯಾತ್ರೆಯಲ್ಲಿ ಕಾರ್ಗಿಲ್ ಯುದ್ಧ ವೀರ ನಾಯಕ್ ದೀಪ್ಚಂದ್ ಹಾಗೂ ಮರಾಠಿ ಚಿತ್ರ ನಟಿ ಮೋನಾ ಅಂಬೆಗಾಂವ್ಕರ್ ಪಾಲ್ಗೊಂಡರು.

ಹರ್ಯಾಣದ ಹಿಸ್ಸಾರ್ ಜಿಲ್ಲೆಯ ನಿವಾಸಿಯಾದ ನಾಯಕ್ ದೀಪಚಂದ್ ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಒಂದು ಕೈ ಹಾಗೂ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು.
ಕರ್ತವ್ಯ ನಿರ್ವಹಣೆಯ  ವೇಳೆ ಅಂಗವೈಕಲ್ಯಕ್ಕೊಳಗಾದ  ಯೋಧರ ಕಲ್ಯಾಣಕ್ಕಾಗಿ ನಾಯಕ್ ದೀಪಚಂದ್ ಅವರು ಆದರ್ಶ ಸೈನಿಕ ಪ್ರತಿಷ್ಠಾನನ್ನು ಸ್ಥಾಪಿಸಿದ್ದರು.

Similar News