×
Ad

ದೇರಾ ಮುಖ್ಯಸ್ಥ ಗುರ್ಮೀತ್‌ ಸಿಂಗ್ 'ಸತ್ಸಂಗ'ಕ್ಕೆ 300 ಮಂದಿ ವಿದ್ಯಾರ್ಥಿಗಳು, ಶಿಕ್ಷಕರು !

ತನಿಖೆಗೆ ಶಿಕ್ಷಣ ಅಧಿಕಾರಿ ಆದೇಶ

Update: 2022-11-19 08:02 IST

ಬರೇಲಿ: ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿ ಪರೋಲ್‍ನಲ್ಲಿ ಜೈಲಿನಿಂದ ಹೊರಗಿರುವ ದೇರಾ ಮುಖ್ಯಸ್ಥ ಗುರ್ಮೀತ್‌ ಸಿಂಗ್ ನಡೆಸಿದ ಆನ್‍ಲೈನ್ ಸತ್ಸಂಗದಲ್ಲಿ 300 ಮಂದಿ ಶಾಲಾ ಮಕ್ಕಳು ಮತ್ತು ಅವರ ಶಿಕ್ಷಕರು ಸಮವಸ್ತ್ರದಲ್ಲಿ ಕಾಣಿಸಿಕೊಂಡ ಬಗೆಗಿನ ವೀಡಿಯೊ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ತನಿಖೆಗೆ ಉತ್ತರ ಪ್ರದೇಶದ ಶಹಜಹಾನ್‍ಪುರ ಮೂಲ ಶಿಕ್ಷಣ ಅಧಿಕಾರಿ (ಬಿಎಸ್‍ಎ) ಆದೇಶ ನೀಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ರೋಜಾ ಪೊಲೀಸ್ ಠಾಣೆ ಪ್ರದೇಶದ ಲಾನ್‍ನಲ್ಲಿ ಗುರುವಾರ ಈ ಸತ್ಸಂಗ ಆಯೋಜಿಸಲಾಗಿತ್ತು.

ಇದನ್ನು 2000ಕ್ಕೂ ಹೆಚ್ಚು ಮಂದಿಗೆ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗಿತ್ತು. ಫರೂಕಾಬಾದ್ ಮತ್ತು ಲಖೀಂಪುರ ಖೇರಿ ಸೇರಿದಂತೆ ನೆರೆಯ ಜಿಲ್ಲೆಗಳಿಂದ ಜನರನ್ನು ಕರೆ ತರಲಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.

"ಈ ಆನ್‍ಲೈನ್ ಸತ್ಸಂಗದಲ್ಲಿ ಶಾಲಾ ಮಕ್ಕಳು ಭಾಗವಹಿಸುವಂತೆ ಕಡ್ಡಾಯಪಡಿಸಿದ ಬಗ್ಗೆ ಮಾಹಿತಿ ಇಲ್ಲ. ಅಲ್ಲಿಗೆ ಮಕ್ಕಳನ್ನು ಕಳುಹಿಸಿದ ಶಾಲೆಯನ್ನು ಪತ್ತೆ ಮಾಡುವಂತೆ ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಈ ಬಗ್ಗೆ ತಕ್ಷಣ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ. ವರದಿ ಸಲ್ಲಿಕೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಮೂಲ ಶಿಕ್ಷಣಾಧಿಕಾರಿ ಸುರೇಂದ್ರ ಕುಮಾರ್ ರಾವತ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News