ಮುಝಫ್ಫರ್‌ ನಗರ ಗಲಭೆ ಪ್ರಕರಣ: ಅಲಹಾಬಾದ್ ಹೈಕೋರ್ಟ್ ನಿಂದ ಅನರ್ಹ ಬಿಜೆಪಿ ಶಾಸಕನ ಜೈಲುಶಿಕ್ಷೆ ಅಮಾನತು

Update: 2022-11-19 16:24 GMT

ಅಲಹಾಬಾದ್,ನ.19: 2013ರ ಮುಝಫ್ಫರ್ನಗರ ಗಲಭೆ ಪ್ರಕರಣದಲ್ಲಿ ಅನರ್ಹ ಬಿಜೆಪಿ ಶಾಸಕ ವಿಕ್ರಮ ಸೈನಿಗೆ ವಿಧಿಸಲಾಗಿದ್ದ ಎರಡು ವರ್ಷಗಳ ಜೈಲುಶಿಕ್ಷೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಶುಕ್ರವಾರ ಅಮಾನತುಗೊಳಿಸಿದೆ.

ಅಕ್ಟೋಬರ್ ನಲ್ಲಿ ಖಟೌಲಿ ಕ್ಷೇತ್ರದ ಮಾಜಿ ಶಾಸಕ ಸೈನಿ ಮತ್ತು ಇತರ 11 ಜನರಿಗೆ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದ್ದ ಮುಝಫ್ಫರ್ನಗರ ನ್ಯಾಯಾಲಯವು ತಲಾ 10,000 ರೂ.ಗಳ ದಂಡ ವಿಧಿಸಿತ್ತು.

ಸೈನಿ ಮತ್ತು ಇತರರು 2013,ಆಗಸ್ಟ್ ನಲ್ಲಿ ಮುಸ್ಲಿಮರ ಗುಂಪಿನಿಂದ ಹತ್ಯೆಯಾಗಿದ್ದರೆನ್ನಲಾದ ಇಬ್ಬರು ಸೋದರ ಸಂಬಂಧಿಗಳಾದ ಸಚಿನ್ ಮತ್ತು ಗೌರವ ಅವರ ಅಂತ್ಯಸಂಸ್ಕಾರದ ಬಳಿಕ ಮುಝಫ್ಫರ್ನಗರ ಜಿಲ್ಲೆಯ ಕವಾಲ್ ಗ್ರಾಮದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದ ಆರೋಪಿಗಳಾಗಿದ್ದರು. ಆಗ ಗ್ರಾಮ ಮುಖ್ಯಸ್ಥರಾಗಿದ್ದ ಸೈನಿ ಹಿಂಸಾಚಾರ ನಡೆಸುವಂತೆ ಗುಂಪನ್ನು ಪ್ರಚೋದಿಸಿದ್ದರು ಎಂದು ಆರೋಪಿಸಲಾಗಿತ್ತು.

ಗ್ರಾಮದಲ್ಲಿಯ ಈ ಜೋಡಿ ಹತ್ಯೆಗಳು ಜಿಲ್ಲೆಯಲ್ಲಿ ಕೋಮು ಗಲಭೆಗೆ ಕಾರಣವಾಗಿದ್ದವು. 65 ಜನರು ಕೊಲ್ಲಲ್ಪಟ್ಟಿದ್ದು, ಸಾವಿರಾರು ಮುಸ್ಲಿಂ ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದವು. ಮುಝಫ್ಫರ್ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ಲೈಂಗಿಕ ಹಲ್ಲೆ ಮತ್ತು ಶೋಷಣೆಗಳ ಹಲವು ಘಟನೆಗಳು ವರದಿಯಾಗಿದ್ದವು.

ತನ್ನ ದೋಷನಿರ್ಣಯವನ್ನು ಪ್ರಶ್ನಿಸಿ ಸೈನಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Similar News