ಬುಲ್ಡೋಝರ್ ಕ್ರಮಕ್ಕೆ ಅನುಮತಿ ನೀಡಿದರೆ ಯಾರೂ ಸುರಕ್ಷಿತ ಅಲ್ಲ: ಗುವಾಹತಿ ಹೈಕೋರ್ಟ್

Update: 2022-11-20 01:58 GMT

ಗುವಾಹತಿ: ತನಿಖೆಗಳ ಹೆಸರಿನಲ್ಲಿ ಬುಲ್ಡೋಝರ್ (bulldozer) ಬಳಕೆ ಮಾಡುವ ಅಸ್ಸಾಂ ಅಧಿಕಾರಿಗಳ ಯೋಜನೆಯನ್ನು ಗುವಾಹತಿ ಹೈಕೋರ್ಟ್ ಧ್ವಂಸಗೊಳಿಸಿದೆ. ಈ ಕ್ರಮದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಹೈಕೋರ್ಟ್, "ಇಂಥ ಕ್ರಮಕ್ಕೆ ಅನುಮತಿ ನೀಡಿದಲ್ಲಿ ದೇಶದಲ್ಲಿ ಯಾರೂ ಸುರಕ್ಷಿತವಲ್ಲ" ಎಂದು ಅಭಿಪ್ರಾಯಪಟ್ಟಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.

ನಾಗಾಂವ್ ಜಿಲ್ಲೆಯಲ್ಲಿ ಸಂಭವಿಸಿದ ಲಾಕಪ್ ಸಾವಿನ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದ ಶಂಕಿತ ಆರೋಪಿಗಳ ಮನೆಗಳನ್ನು ನೆಲಸಮ ಮಾಡಿದ ಘಟನೆಯ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ಆ‌ರ್‌ಎಂ ಛಾಯಾ ಮತ್ತು ನ್ಯಾಯಮೂರ್ತಿ ಸೌಮಿತ್ರ ಸೈಕಿಯಾ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

"ನೀವು (ಸರ್ಕಾರ) ಅಪರಾಧ ತನಿಖೆಗಾಗಿ ಯಾವುದೇ ಅಪರಾಧ ಕಾನೂನು ಕೌಶಲವನ್ನು ತೋರಿಸಬಹುದು. ಪೊಲೀಸರು ಯಾವುದೇ ಆದೇಶ ಇಲ್ಲದೇ ವ್ಯಕ್ತಿಯನ್ನು ಬುಡಮೇಲು ಮಾಡಿ ಬುಲ್ಡೋಝರ್ ಅನ್ವಯಿಸಬಹದೇ?" ಎಂದು ನ್ಯಾಯಮೂರ್ತಿ ಛಾಯಾ ಸರ್ಕಾರಿ ವಕೀಲರನ್ನು ವಿಚಾರಣೆ ವೇಳೆ ಪ್ರಶ್ನಿಸಿದ್ದರು.

ಪ್ರಕರಣದ ಕುರಿತು ಸಲ್ಲಿಸಿದ ವರದಿ ಬಗ್ಗೆ ಪ್ರಸ್ತಾಪಿಸಿ, "ಅವರು ಎಸ್ಪಿ ಆಗಿರಬಹುದು. ಅವರು ಕೂಡಾ ಕಾನೂನು ಪಾಲಿಸಬೇಕಾಗುತ್ತದೆ. ಪೊಲೀಸ್ ಇಲಾಖೆಯ ಮುಖ್ಯಸ್ಥ ಎಂಬ ಕಾರಣಕ್ಕೆ ಯಾರದೋ ಮನೆ ಧ್ವಂಸ ಮಾಡಲು ಸಾಧ್ಯವಿಲ್ಲ. ಇಂಥ ಕ್ರಮಕ್ಕೆ ಅನುಮತಿ ನೀಡಿದರೆ ದೇಶದಲ್ಲಿ ಯಾರೂ ಸುರಕ್ಷಿತವಲ್ಲ" ಎಂದು ನ್ಯಾಯಮೂರ್ತಿಗಳು ಹೇಳಿದರು.

ಈ ಕ್ರಮಕ್ಕೆ ಯಾವುದೇ ಪೂರ್ವಾನುಮತಿ ಪಡೆಯಲಾಗಿದೆಯೇ ಎಂದು ಹೈಕೋರ್ಟ್ ತಿಳಿಯಬಯಸಿದೆ. ಮನೆಗಳನ್ನು ಶೋಧ ನಡೆಸುವ ವಿಚಾರದಲ್ಲಿ ಅನುಮತಿ ಪಡೆಯಲಾಗಿತ್ತು ಎಂದು ವಕೀಲರು ಸ್ಪಷ್ಟಪಡಿಸಿದರು. "ಇಂಥ ಕ್ರಮ ನನ್ನ ವೃತ್ತಿಯ ಸೀಮಿತ ಅವಧಿಯಲ್ಲಿ ಕಂಡುಬಂದಿಲ್ಲ. ಸರ್ಚ್‍ವಾರೆಂಟ್ ಹಿಡಿದು ಪೊಲೀಸ್ ಅಧಿಕಾರಿ ಬುಲ್ಡೋಝರ್ ಬಳಸಿದ ಕ್ರಮ ನನ್ನ ಗಮನಕ್ಕೆ ಬಂದಿರಲಿಲ್ಲ" ಎಂದು ನ್ಯಾಯಮೂರ್ತಿ ವ್ಯಕ್ತಪಡಿಸಿದರು ಎಂದು timesofindia.com ವರದಿ ಮಾಡಿದೆ.

Similar News