ಅತ್ಯಾಚಾರ ಪ್ರಕರಣ: ಹೈಕೋರ್ಟ್ ಛೀಮಾರಿ ಬಳಿಕ ಇಬ್ಬರು ಪೊಲೀಸರ ಬಂಧನ; ಎಸ್‍ಐ ನಾಪತ್ತೆ

Update: 2022-11-20 02:17 GMT

ಲಕ್ನೋ: ಹದಿಹರೆಯದ ಇಬ್ಬರು ಸೋದರ ಸಂಬಂಧಿ ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಸಂಬಂಧ ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಛೀಮಾರಿ ಹಾಕಿದ ಬಳಿಕ ಹರ್ದೋಯಿ ಪೊಲೀಸರು ಶನಿವಾರ ಇಬ್ಬರು ಪೊಲೀಸರನ್ನು ಬಂಧಿಸಿದ್ದಾರೆ.

2022ರ ಏಪ್ರಿಲ್‍ನಲ್ಲಿ ನಡೆದ ಈ ಪ್ರಕರಣದ ಮೂರನೇ ಆರೋಪಿ, ಸಬ್‍ಇನ್‍ಸ್ಪೆಕ್ಟರ್ ತಲೆ ಮರೆಸಿಕೊಂಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ಪೊಲೀಸರ ನಿಷ್ಕ್ರಿಯತೆ ವಿರುದ್ಧ ಸಂತ್ರಸ್ತ ಯುವತಿಯರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು ಹಾಗೂ ಈ ಬಗ್ಗೆ ಕೋರ್ಟ್‍ಗೆ ಮಾಹಿತಿ ನೀಡುವಂತೆ ಆದೇಶಿಸಿತ್ತು.

ಪ್ರಕರಣದ ಸಂಬಂಧ ಇದೀಗ ಮನೋಜ್ ಸಿಂಗ್ ಹಾಗೂ ಹಿಮಾಂಶುಸಿಂಗ್ ಎಂಬವರನ್ನು ಬಂಧಿಸಲಾಗಿದ್ದು, ಎಸ್‍ಐ ಸಂಜಯ್ ಸಿಂಗ್ ತಲೆ ಮರೆಸಿಕೊಂಡಿದ್ದಾರೆ. ಆಗಸ್ಟ್ 21ರಂದು ಕೋರ್ಟ್ ನಿರ್ದೇಶನದ ಅನ್ವಯ ಎಫ್‍ಐಆರ್ ದಾಖಲಿಸಲಾಗಿತ್ತು ಎಂದು ಎಸ್ಪಿ ರಾಜೇಶ್ ದ್ವಿವೇದಿ ಹೇಳಿದ್ದಾರೆ. ಎಸ್‍ಐ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಸ್ತೆ ಬದಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 18 ಮತ್ತು 19 ವರ್ಷ ವಯಸ್ಸಿನ ಈ ಯುವತಿಯರ ಮೇಲೆ 2022ರ ಏಪ್ರಿಲ್ 14ರಂದು ಪೊಲೀಸರು ಅತ್ಯಾಚಾರ ಎಸಗಿದ್ದರು ಎಂದು ಯುವತಿಯರ ಪೋಷಕರು ದೂರು ನೀಡಿದ್ದರು.

ನಾವು ಸಾಕಷ್ಟು ಅಲೆದಾಡಿದರೂ ಪ್ರಕರಣ ದಾಖಲಿಸಲಿಲ್ಲ. ಬಳಿಕ ಹರ್ದೋಯಿ ಎಸ್ಪಿಯನ್ನು ಭೇಟಿ ಮಾಡಿದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಕೊನೆಗೆ ಸ್ಥಳೀಯ ಕೋರ್ಟ್‍ನಲ್ಲಿ ದಾವೆ ಸಲ್ಲಿಸಿದೆವು ಎಂದು ಪೋಷಕರು ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News