9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಮಾಡಿ ಮೃತದೇಹವನ್ನು ಕಾಡಿಗೆ ಎಸೆದ ಮಾವ!

Update: 2022-11-20 02:37 GMT

ಭೋಪಾಲ್: ಒಂಬತ್ತು ವರ್ಷದ ಬಾಲಕಿಯ ಮೇಲೆ ಆಕೆಯ ಮಾವನೇ ಅತ್ಯಾಚಾರ ಎಸಗಿ, ಸಂತ್ರಸ್ತೆಯನ್ನು ಕೊಲೆ ಮಾಡಿ ಶವವನ್ನು ಅರಣ್ಯದಲ್ಲಿ ಎಸೆದ ಘಟನೆ ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ಸಂಭವಿಸಿದೆ ಎಂದು timesofindia.com ವರದಿ ಮಾಡಿದೆ.

ಕೃತ್ಯ ಎಸಗಿದ 22 ವರ್ಷದ ಯುವಕ ಸಂತ್ರಸ್ತೆಯ ಮನೆಗೂ ಭೇಟಿ ನೀಡಿ, ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ, ಬಾಲಕಿಯ ಶೋಧದಲ್ಲೂ ಪಾಲ್ಗೊಂಡಿದ್ದ. ಆದರೆ ಶುಕ್ರವಾರ ಆತನ ಜತೆಗೆ ಬಾಲಕಿ ಜೀವಂತವಾಗಿ ಇದ್ದುದನ್ನು ಜನ ನೋಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಗುರಿಪಡಿಸಿ ಬಂಧಿಸಲಾಗಿದೆ. ಶನಿವಾರ ಮುಂಜಾನೆ ಬಾಲಕಿಯ ಮೃತದೇಹ ಕಾಡಿನಲ್ಲಿ ಪತ್ತೆಯಾಗಿತ್ತು. ಆರೋಪಿ ಯುವಕ ಬಾಲಕಿಯ ಅತ್ತೆಯ ಗಂಡ. ಪಕ್ಕದ ಜಿಲ್ಲೆಯಲ್ಲಿ ವಾಸವಿದ್ದ. ಕೆಲ ದಿನಗಳ ಹಿಂದೆ ಬಾಲಕಿಯ ಮನೆಗೆ ಭೇಟಿ ನೀಡಿದ್ದ.

ಶುಕ್ರವಾರ ಬಾಲಕಿಯ ಪೋಷಕರು ಕೆಲಸಕ್ಕೆ ಹೋಗಿದ್ದಾಗ, ಚಾಕಲೇಟ್ ಕೊಡಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಉಸಿರು ಕಟ್ಟಿಸಿ ಕೊಲೆ ಮಾಡಿ ಶವವನ್ನು ಕಾಡಿಗೆ ಎಸೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪೋಷಕರು ಬಂದು ನೋಡಿದಾಗ ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ತನಗೇನೂ ತಿಳಿದಿಲ್ಲ ಎಂದು ಆರೋಪಿ ಹೇಳಿದ. ಗ್ರಾಮದಲ್ಲಿ ಹುಡುಕಾಟ ನಡೆಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಾಲಕಿ ಮಾವನ ಜತೆಗೆ ಇದ್ದ ಬಗ್ಗೆ ಮಾಹಿತಿ ಪೊಲೀಸರಿಗೆ ದೊರಕಿತು. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಠಾಣಾಧಿಕಾರಿ ಗೌರವ್ ಸಿಂಗ್ ವಿವರ ನೀಡಿದ್ದಾರೆ. ಈ ಬಗ್ಗೆ  timesofindia.com ವರದಿ ಮಾಡಿದೆ.

Similar News