×
Ad

ಮಧ್ಯಪ್ರದೇಶ: ಆಸ್ಪತ್ರೆಯ ಐಸಿಯು ಒಳಗಡೆ ಸ್ವಚ್ಛಂದವಾಗಿ ಸುತ್ತಾಡುತ್ತಿರುವ ಹಸು; ವೀಡಿಯೊ ವೈರಲ್

Update: 2022-11-20 15:07 IST

ರಾಜ್‌ಗಢ: ಶುಕ್ರವಾರ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕಕ್ಕೆ (ಐಸಿಯು) ಹಸುವೊಂದು ಪ್ರವೇಶಿಸಿದ ಆಘಾತಕಾರಿ ಹಾಗೂ ನಿರ್ಲಕ್ಷ್ಯಯುತ ಘಟನೆ ನಡೆದಿದೆ. ಆಸ್ಪತ್ರೆ ಆವರಣದಲ್ಲಿದ್ದ ಕಸದ ತೊಟ್ಟಿಗಳಲ್ಲಿರುವ ವೈದ್ಯಕೀಯ ತ್ಯಾಜ್ಯವನ್ನು ಹಸು ತಿಂದು ಸ್ವಚ್ಛಂದವಾಗಿ ತಿರುಗಾಡುತ್ತಿರುವುದು ಕಂಡು ಬಂದಿದೆ.

ಆಸ್ಪತ್ರೆಯಲ್ಲಿ ದಿನವಿಡೀ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಹಸುವನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಲು ಯಾರೂ ಇರಲಿಲ್ಲ. ಆಸ್ಪತ್ರೆಯಲ್ಲಿ ಇಬ್ಬರು ಹಸು ಹಿಡಿಯುವವರನ್ನು ನೇಮಿಸಲಾಗಿದೆ ಆದರೆ ಘಟನೆ ನಡೆದಾಗ ಅವರೂ ಇರಲಿಲ್ಲ ಎಂದು ತಿಳಿದು ಬಂದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಒಬ್ಬ ಸೆಕ್ಯೂರಿಟಿ ಗಾರ್ಡ್ ಮತ್ತು ಇತರ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ತೆಗೆದುಹಾಕಲಾಗಿದೆ.

ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ ರಾಜೇಂದ್ರ ಕಟಾರಿಯಾ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದು, "ನಾನು ಪರಿಸ್ಥಿತಿಯನ್ನು ಗಮನಿಸಿದ್ದೇನೆ ಮತ್ತು ವಾರ್ಡ್ ಬಾಯ್ ಮತ್ತು ಸೆಕ್ಯುರಿಟಿ ಗಾರ್ಡ್ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಈ ಘಟನೆ ನಮ್ಮ ಹಳೆಯ ಕೋವಿಡ್ ಐಸಿಯು ವಾರ್ಡ್‌ ನದ್ದಾಗಿದೆ" ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರಭುರಾಮ್ ಚೌಧರಿ ಅವರು ಆರಂಭದಲ್ಲಿ ಅಂತಹ ಯಾವುದೇ ಘಟನೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದರು. ಆದರೆ ವಿಡಿಯೋ ವೈರಲ್ ಆದ ನಂತರ ಮೂವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

Similar News