ವಿದ್ಯಾರ್ಥಿ ಸಮುದಾಯ ವೈವಿಧ್ಯತೆ, ಒಳಗೊಳ್ಳುವಿಕೆಗೆ ಆದ್ಯತೆ ನೀಡಿ: ಆಕ್ಸಿಸ್ ಬ್ಯಾಂಕಿನ ಸಿಇಓ ಅಮಿತಾಬ್ ಚೌಧುರಿ

Update: 2022-11-20 15:16 GMT

ಉಡುಪಿ, ನ.20: ವಿದ್ಯಾರ್ಥಿ ಸಮುದಾಯ ತಮ್ಮ ವೃತ್ತಿ ಬದುಕಿನ ಪರಿಣಾಮಕಾರಿ ಪ್ರಗತಿಗಾಗಿ ವೈವಿಧ್ಯತೆ ಹಾಗೂ ಎಲ್ಲವನ್ನೂ ಒಳಗೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮುಂಬಯಿ ಆಕ್ಸಿಸ್ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಅಮಿತಾಬ್ ಚೌಧುರಿ ಹೇಳಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ರವಿವಾರ ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ (ಮಾಹೆ) 30ನೇ ಘಟಿಕೋತ್ಸವದ ಮೂರನೇ ದಿನದಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.

ನಮ್ಮ ಸುತ್ತಲಿನ ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ತಂತ್ರಜ್ಞಾನದ ಹಸ್ತಕ್ಷೇಪದಿಂದಾಗಿ ವಿದ್ಯಾರ್ಥಿ ಗಳು ತಮ್ಮ ವೃತ್ತಿ ಬದುಕಿನ ಪ್ರಗತಿಗಾಗಿ  ವೈವಿಧ್ಯತೆ ಹಾಗೂ ಎಲ್ಲವನ್ನೂ ಒಳಗೊಳ್ಳಿಸಿಕೊಳ್ಳುವ ಅಗತ್ಯವಿದೆ ಎಂದರು.

ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಕೋನ ನಮ್ಮದಾದರೆ, ಇದರಿಂದ ಬಹುಮುಖ  ಪರಿಣಾಮಗಳಿವೆ. ಹಿಂದೆಲ್ಲಕ್ಕಿಂತ ಹೆಚ್ಚು ಗ್ರಾಮೀಣ ಮತ್ತು ಸಣ್ಣ ನಗರಗಳು ಭಾರತದ ಪ್ರಗತಿಯಲ್ಲಿ ಅವಿಭಾಜ್ಯ ಅಂಗವಾಗಿದೆ. ಈ ಭಾರತವನ್ನು ಜೊತೆಯಲ್ಲಿರಿಸಿಕೊಳ್ಳದೇ ನಾವು ಮುಂದೆ ಹೆಜ್ಜೆ ಇರಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಮಣಿಪಾಲವೇ ಅತ್ಯುತ್ತಮ ಉದಾಹರಣೆಯಾಗಿದೆ ಎಂದರು.

ಮೂರನೇ ದಿನದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಆರ್.ಪೈ, ಮಾಹೆಯ ಕುಲಪತಿ ಲೆ.ಜ.(ಡಾ)ಎಂ.ಡಿ.ವೆಂಕಟೇಶ್, ಪ್ರೊ ವೈಸ್ ಚಾನ್ಸಲರ್‌ಗಳಾದ ಡಾ.ವೆಂಕಟ್ರಾಯ ಪ್ರಭು, ಡಾ.ದಿಲೀಪ್ ಜಿ.ನಾಯಕ್, ಡಾ.ಪ್ರಜ್ಞಾ ರಾವ್, ರಿಜಿಸ್ಟ್ರಾರ್‌ಗಳಾದ ಡಾ.ನಾರಾಯಣ ಸಭಾಹಿತ್ ಹಾಗೂ ಡಾ.ವಿನೋದ್ ವಿ.ಥಾಮಸ್ ಉಪಸ್ಥಿತರಿದ್ದರು.

ಇಂದು ಮಣಿಪಾಲ ಸ್ಕೂಲ್ ಆಫ್ ಲೈಫ್ ಸಾಯನ್ಸ್‌ನ ವಾರಂಗೆ ಶಿವಾಂಗಿ, ವಿಜಯ ನಮ್ರತಾ, ಎಂಐಸಿಯ ದೇಸಾಯಿ ಕಿಯುರಿ ಮಿಲಿಂದ್, ಮಂಗಳೂರು ಕೆಎಂಸಿಯ ವೈಷ್ಣವಿ ಬಲ್ಲಾಳ್, ಮಣಿಪಾಲ ಡೆಂಟಲ್ ಕಾಲೇಜಿನ ಮುಸ್ಕಾನ್ ಛಿಛ್ರಾ ಹಾಗೂ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಪೇಶನ್‌ನ ಸ್ತುತಿ ಪಾರಿಖ್ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಿರುವ ಡಾ.ಟಿಎಂಎ ಪೈ ಚಿನ್ನದ ಪದಕವನ್ನು ಪಡೆದರು.

Similar News