×
Ad

ಭಾರತ ಜೋಡೊ ಯಾತ್ರೆಯಲ್ಲಿ ಮೇಧಾ ಪಾಟ್ಕರ್ ಜೊತೆ ಹೆಜ್ಜೆ ಹಾಕಿದ್ದಕ್ಕಾಗಿ ರಾಹುಲ್ ವಿರುದ್ಧ ಪ್ರಧಾನಿ ಮೋದಿ ಕಿಡಿ

Update: 2022-11-20 21:42 IST

ರಾಜಕೋಟ್ (ಗುಜರಾತ),ನ.20: ತನ್ನ ಭಾರತ ಜೋಡೊ ಯಾತ್ರೆಯ ಸಂದರ್ಭದಲ್ಲಿ ನರ್ಮದಾ ಅಣೆಕಟ್ಟು ಯೋಜನೆಯ ವಿರುದ್ಧ ಆಂದೋಲನ ನಡೆಸಿದ್ದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಜೊತೆ ಹೆಜ್ಜೆಗಳನ್ನು ಹಾಕಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಕಿಡಿಕಾರಿದ್ದಾರೆ. ಯೋಜನೆಯನ್ನು ಗುಜರಾತಿನ ಜೀವನಾಡಿ ಎಂದು ಅವರು ಬಣ್ಣಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ರವಿವಾರ ರಾಜಕೋಟ್ ಜಿಲ್ಲೆಯಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಮೋದಿ, ಮೂರು ದಶಕಗಳ ಕಾಲ ನರ್ಮದಾ ಅಣೆಕಟ್ಟು ಯೋಜನೆಯನ್ನು ನಿಲ್ಲಿಸಿದ್ದ ಮಹಿಳೆಯೊಂದಿಗೆ ಕಾಂಗ್ರೆಸ್ ನಾಯಕ ಪಾದಯಾತ್ರೆಯನ್ನು ನಡೆಸಿದ್ದಾರೆ. ಪಾಟ್ಕರ್ ಸೇರಿದಂತೆ ಸಾಮಾಜಿಕ ಕಾರ್ಯಕರ್ತರು ಸೃಷ್ಟಿಸಿದ್ದ ಕಾನೂನು ತೊಡಕುಗಳಿಂದಾಗಿ ಯೋಜನೆಯು ಸ್ಥಗಿತಗೊಳ್ಳುವಂತಾಗಿತ್ತು. ಪಾಟ್ಕರ್ ಗುಜರಾತಿನ ಹೆಸರು ಕೆಡಿಸಿದ್ದರು ಎಂದು ಆರೋಪಿಸಿದರು.

‘ನಿಮ್ಮ ಮತಗಳನ್ನು ಕೋರಲು ಕಾಂಗ್ರೆಸ್ ನಿಮ್ಮ ಬಳಿ ಬಂದಾಗ ನರ್ಮದಾ ಯೋಜನೆಗೆ ವಿರುದ್ಧವಾಗಿದ್ದವರ ಹೆಗಲುಗಳ ಮೇಲೆ ಕೈಹಾಕಿ ಹೆಜ್ಜೆಗಳನ್ನು ಹಾಕುತ್ತಿದ್ದ ಬಗ್ಗೆ ಪ್ರಶ್ನಿಸಿ’ಎಂದೂ ಮೋದಿ ಜನರಿಗೆ ಕರೆ ನೀಡಿದರು.

ಪ್ರಸುತ ಮಹಾರಾಷ್ಟ್ರದ ಮೂಲಕ ಸಾಗುತ್ತಿರುವ ಭಾರತ ಜೋಡೊ ಯಾತ್ರೆಯಲ್ಲಿ ಇತ್ತೀಚಿಗೆ ಪಾಟ್ಕರ್ ಅವರು ರಾಹುಲ್ ಜೊತೆಗೂಡಿದ್ದರು.

Similar News