ಪಂಜಾಬ್ ರಾಕೆಟ್ ದಾಳಿ ಪ್ರಕರಣ: ಆರೋಪಿ ಖಾಲಿಸ್ತಾನಿ ಭಯೋತ್ಪಾದಕ ಪಾಕಿಸ್ತಾನದಲ್ಲಿ ಮೃತ್ಯು

Update: 2022-11-20 16:29 GMT

ಚಂಡಿಗಡ,ನ.20: ಕಳೆದ ಮೇ ತಿಂಗಳಿನಲ್ಲಿ ಪಂಜಾಬ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿಯ ಮೇಲೆ ರಾಕೆಟ್ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖಾಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂದಾ (35) ಪಾಕಿಸ್ತಾನದಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ ಎಂದು ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಮೂಲಗಳು ಹೇಳಿವೆ.

ರಿಂದಾನ ಸಾವಿಗೆ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲವಾದರೂ ಆತನನ್ನು ಲಾಹೋರ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು ಎಂದು ಅವು ತಿಳಿಸಿವೆ.

ನಿಷೇಧಿತ ಖಾಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ ಸದಸ್ಯನಾಗಿದ್ದ ರಿಂದಾ ಪಂಜಾಬಿನಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸಲು ಸ್ಥಳೀಯ ಗ್ಯಾಂಗ್‌ಸ್ಟರ್‌ಗಳ ನೆರವು ಪಡೆಯುತ್ತಿದ್ದ ಮತ್ತು ಆತ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗಿತ್ತು.

ಈ ವರ್ಷದ ಮೇ ತಿಂಗಳಿನಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿಯ ಮೇಲೆ ನಡೆದಿದ್ದ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ (ಆರ್‌ಪಿಜಿ) ದಾಳಿಯಲ್ಲಿ ರಿಂದಾನ ಹೆಸರು ಕಾಣಿಸಿಕೊಂಡಿತ್ತು. ಅದೇ ತಿಂಗಳು ಹರ್ಯಾಣದಲ್ಲಿ ವಾಹನವೊಂದರಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ವಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿಯೂ ಆತನ ವಿರುದ್ಧ ಆರೋಪ ಪಟ್ಟಿ ದಾಖಲಾಗಿತ್ತು. ಕಳೆದ ವರ್ಷದ ನವಂಬರ್‌ನಲ್ಲಿ ನವಾನ್‌ಶಹರ್‌ನಲ್ಲಿಯ ಅಪರಾಧ ತನಿಖಾ ಸಂಸ್ಥೆಯ ಮೇಲಿನ ಹ್ಯಾಂಡ್ ಗ್ರೇನೇಡ್ ದಾಳಿಯಲ್ಲಿಯೂ ಆತನ ಭಾಗಿಯಾಗಿದ್ದು ಪತ್ತೆಯಾಗಿತ್ತು.

ಗ್ಯಾಂಗ್‌ಸ್ಟರ್‌ಗಳು ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳ ನಡುವಿನ ಮುಖ್ಯ ಕೊಂಡಿಯಾಗಿದ್ದ ರಿಂದಾ ಗಡಿಯಾಚೆಯಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮಾದಕ ದ್ರವ್ಯಗಳ ಕಳ್ಳ ಸಾಗಣೆಯಲ್ಲಿ ಭಾಗಿಯಾಗಿದ್ದರಿಂದ ಆತ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದಾನೆ ಎಂದು ತನಿಖಾ ಸಂಸ್ಥೆಗಳು ಬಣ್ಣಿಸಿದ್ದವು.

ಪಂಜಾಬಿನಲ್ಲಿ ‘‘ಮೋಸ್ಟ್ ವಾಂಟೆಡ್ ‘ಎ’ಪ್ಲಸ್ ವರ್ಗ’’ದ ಗ್ಯಾಂಗ್‌ಸ್ಟರ್ ಆಗಿದ್ದ ರಿಂದಾ ಮಹಾರಾಷ್ಟ್ರ,ಚಂಡಿಗಡ,ಹರ್ಯಾಣ ಮತ್ತು ಪ.ಬಂಗಾಳ ಸೇರಿದಂತೆ ಇತರ ಸ್ಥಳಗಳಲ್ಲಿಯೂ ಹಲವಾರು ಪ್ರಕರಣಗಳಲ್ಲಿ ಅಪೇಕ್ಷಿತ ಆರೋಪಿಯಾಗಿದ್ದ.

ಹಲವಾರು ವರ್ಷಗಳ ಹಿಂದೆ ಪಂಜಾಬಿನ ತರನ್ ತಾರನ್ ಜಿಲ್ಲೆಯ ಸರಹಲಿ ಗ್ರಾಮದಿಂದ ಮಹಾರಾಷ್ಟ್ರದ ನಾಂದೇಡ್‌ಗೆ ವಲಸೆ ಹೋಗಿದ್ದ ರಿಂದಾ,2008ರಲ್ಲಿ ತರನ್ ತಾರನ್‌ದಲ್ಲಿ ವೈಯಕ್ತಿಕ ದ್ವೇಷದಿಂದ ವ್ಯಕ್ತಿಯೋರ್ವನ ಹತ್ಯೆಯ ಮೂಲಕ ಅಪರಾಧ ಲೋಕವನ್ನು ಪ್ರವೇಶಿಸಿದ್ದ. ಚಂಡಿಗಡದ ಹೋಷಿಯಾರಪುರ ಸರಪಂಚ ಸತ್ನಾಮ್ ಸಿಂಗ್ ಅವರ ಹಾಡಹಗಲೇ ಕೊಲೆಯಲ್ಲಿಯೂ ರಿಂದಾ ಭಾಗಿಯಾಗಿದ್ದ.

ತನ್ನ ಗ್ಯಾಂಗ್‌ನೊಂದಿಗೆ ಕೊಲೆಗಳು,ದರೋಡೆ ಮತ್ತು ಹಫ್ತಾವಸೂಲಿ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ರಿಂದಾ ತಲೆಮರೆಸಿಕೊಂಡಿದ್ದು,ಕನಿಷ್ಠ 30 ತಿಳಿದಿರುವ ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ.

Similar News