×
Ad

ಕೇರಳ: ಫಿಫಾ ವರ್ಲ್ಡ್‌ಕಪ್‌ ವೀಕ್ಷಿಸಲೆಂದೇ 23 ಲಕ್ಷದ ಪ್ರತ್ಯೇಕ ಮನೆ ಖರೀದಿಸಿದ ಫುಟ್‌ಬಾಲ್‌ ಅಭಿಮಾನಿಗಳು

Update: 2022-11-20 22:21 IST

ಕೊಚ್ಚಿ: ಕತಾರ್‌ನಲ್ಲಿ ಪ್ರಾರಂಭವಾಗಿರುವ 2022 ರ FIFA ವಿಶ್ವಕಪ್ ಕಣ್ತುಂಬಿಕೊಳ್ಳಲು ಫುಟ್‌ಬಾಲ್ ಅಭಿಮಾನಿಗಳು ಸಜ್ಜಾಗಿದ್ದಾರೆ. ಕೇರಳದಲ್ಲಂತೂ ತಮ್ಮ ನೆಚ್ಚಿನ ಆಟಗಾರರ ಕಟೌಟ್‌ಗಳು ಮತ್ತು ಪೋಸ್ಟರ್‌ಗಳಿಂದ ಬೀದಿಗಳನ್ನು ಅಲಂಕರಿಸಿದ್ದಾರೆ. ಇದೀಗ ಅಂತಹದ್ದೇ ಫುಟ್‌ಬಾಲ್ ಅಭಿಮಾನವನ್ನು ವ್ಯಕ್ತಪಡಿಸುವಂತಹ ಸುದ್ದಿ ಕೇರಳದಿಂದಲೇ ಬಂದಿದೆ. 

ಕೇರಳದ ಕೊಚ್ಚಿಯ ಮುಂಡಕ್ಕಮುಗಲ್ ಗ್ರಾಮದ 17 ಮಂದಿ ಫುಟ್‌ಬಾಲ್‌ ಅಭಿಮಾನಿಗಳು ₹ 23 ಲಕ್ಷಕ್ಕೆ ಮನೆಯೊಂದನ್ನು ಖರೀದಿಸಿದ್ದು, ಅವರು ಒಂದೇ ಸ್ಥಳದಲ್ಲಿ ಒಟ್ಟಿಗೆ ಫಿಫಾ ಪಂದ್ಯಗಳನ್ನು ವೀಕ್ಷಿಸಲು ಈ ಮನೆಯನ್ನು ಕೊಂಡಿದ್ದಾರೆ. ಫುಟ್ಬಾಲ್ ಸ್ನೇಹಿತರು ಹೊಸದಾಗಿ ಖರೀದಿಸಿದ ಮನೆಯನ್ನು ವಿಶ್ವಕಪ್‌ನಲ್ಲಿ ಭಾಗವಹಿಸುವ 32 ತಂಡಗಳ ಧ್ವಜಗಳ ಜೊತೆಗೆ ಫುಟ್‌ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಪಂದ್ಯ ವೀಕ್ಷಿಸಲು ಸಾಧ್ಯವಾಗುವಂತಹ ದೊಡ್ಡ ಪರದೆಯ ದೂರದರ್ಶನವನ್ನು ಅಳವಡಿಸಲಾಗಿದೆ.

"ನಾವು FIFA ವಿಶ್ವಕಪ್ 2022 ಗಾಗಿ ವಿಶೇಷವಾದದ್ದನ್ನು ಮಾಡಲು ಯೋಜಿಸಿದ್ದೇವೆ. ನಮ್ಮಲ್ಲಿ 17 ಜನರು ಈಗಾಗಲೇ ₹ 23 ಲಕ್ಷಕ್ಕೆ ಮಾರಾಟದಲ್ಲಿರುವ ಮನೆಯನ್ನು ಖರೀದಿಸಿದ್ದೇವೆ. ಅದನ್ನು FIFA ತಂಡಗಳ ಧ್ವಜಗಳಿಂದ ಅಲಂಕರಿಸಿದ್ದೇವೆ. ನಾವು ಇಲ್ಲಿ ಒಟ್ಟಿಗೆ ಸೇರಲು ಮತ್ತು ಪಂದ್ಯವನ್ನು ವೀಕ್ಷಿಸಲು ಯೋಜಿಸಿದ್ದೇವೆ ಅದಕ್ಕಾಗಿ ದೊಡ್ಡ ಪರದೆಯ ಟಿವಿಯನ್ನು ಅಳವಡಿಸಿದ್ದೇವೆ" ಎಂದು ಖರೀದಿದಾರರಲ್ಲಿ ಒಬ್ಬರಾದ ಶೆಫೀರ್ ಪಿಎ ಎಎನ್‌ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

"ಭವಿಷ್ಯದಲ್ಲಿ, ನಮ್ಮ ಮುಂದಿನ ಪೀಳಿಗೆ ಕೂಡ ಈ ಕೂಟವನ್ನು ಆನಂದಿಸಬಹುದು. ನಾವು ದೊಡ್ಡ ಟಿವಿ ಖರೀದಿಸಲು ಯೋಜಿಸುತ್ತಿದ್ದೇವೆ. ಎಲ್ಲಾ ತಲೆಮಾರುಗಳ ವೀಕ್ಷಕರು ಇಲ್ಲಿಗೆ ಬಂದು ಒಟ್ಟಿಗೆ ಆಟವನ್ನು ಆನಂದಿಸಲು ನಾವು ವ್ಯವಸ್ಥೆ ಮಾಡುತ್ತೇವೆ" ಎಂದು ಶೆಫೀರ್ ಪಿಎ ಹೇಳಿದ್ದಾರೆ. ವಿಶ್ವಕಪ್ ಮುಗಿದ ನಂತರ ಈ ಮನೆಯು ಸಾಮಾಜಿಕ ಸೇವೆಗಳು, ತುರ್ತು ಸೇವೆಗಳು ಮತ್ತು ಕ್ರೀಡಾಕೂಟಗಳಿಗೆ ಕೇಂದ್ರವಾಗಲಿದೆ ಎಂದು ಅವರು ಹೇಳಿದ್ದಾರೆ.

Similar News