ಸ್ವಕ್ಷೇತ್ರದಲ್ಲಿ ಸೋಲಿನ ಸುಳಿ? ಏನಿದ್ದೀತು ಬೊಮ್ಮಾಯಿ ನಡೆ?

Update: 2022-11-21 02:53 GMT

ಮತ್ತೆ ವಿಧಾನ ಸಭಾ ಚುನಾವಣೆ ಬರುತ್ತಿದೆ. ಕೆಲವೇ ತಿಂಗಳುಗಳು ಬಾಕಿಯಿರುವಂತೆಯೇ ರಾಜಕೀಯ ಅಖಾಡಗಳು ಸಜ್ಜಾಗುತ್ತಿವೆ. ಚುನಾವಣೆಯನ್ನೇ ದೃಷ್ಟಿಯಲ್ಲಿರಿಸಿಕೊಂಡು ವರ್ಷಗಳಿಂದ ಅನುಸರಿಸಿಕೊಂಡು ಬಂದ ತಂತ್ರಗಳೂ ಕಡಿಮೆಯಿಲ್ಲ. ಈಗ ಹೊಸದಾಗಿ ಹೆಣೆಯುತ್ತಿರುವ ವ್ಯೆಹಗಳದ್ದೂ ಮತ್ತೊಂದು ಪಾಲು. ಇಂಥ ಹೊತ್ತಿನಲ್ಲಿ ಮೊದಲ ಸುತ್ತಿನಲ್ಲಿ ಪ್ರಮುಖ ರಾಜಕೀಯ ನಾಯಕರ ಕ್ಷೇತ್ರಗಳಲ್ಲಿ ಹೇಗೆಲ್ಲಾ ಅಲೆಯಿದೆ? ಹಿಂದಿನ ಸೋಲು-ಗೆಲುವಿನ ಹಿನ್ನೆಲೆಯಲ್ಲಿನ ಲೆಕ್ಕಾಚಾರಗಳು ಏನು? ಜಾತಿ ಸಮೀಕರಣವು ತೋರುತ್ತಿರುವ ಸುಳಿವು-ಸೂಚನೆಗಳೇನು? ಇಂಥ ಕುತೂಹಲಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವ್-ಸವಣೂರು ಕ್ಷೇತ್ರದ ಕುರಿತು ಒಂದು ನೋಟ.

ರಾಜ್ಯದಲ್ಲಿ ಬಿಜೆಪಿ ಈ ಸಲ ಬೊಮ್ಮಾಯಿಯವರ ನಾಯಕತ್ವ ದಲ್ಲಿ ಚುನಾವಣೆ ಎದುರಿಸುತ್ತಿದ್ದು, ಯಡಿಯೂರಪ್ಪನವರ ಮಾರ್ಗದರ್ಶನವಿರುತ್ತದೆ ಎನ್ನಲಾಗಿದೆ. ರಾಜ್ಯದ ಮುಖ್ಯ ಮಂತ್ರಿಯಾಗಿ, ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಬೇಕಾದ ಜವಾಬ್ದಾರಿ ಹೊತ್ತಿರುವವರಾಗಿ ಬಸವರಾಜ ಬೊಮ್ಮಾಯಿಗೆ ತಮ್ಮದೇ ಕ್ಷೇತ್ರದಲ್ಲಿ ಇರುವ ಸವಾಲುಗಳೇನು? ಈಗಾಗಲೇ ಶಿಗ್ಗಾಂವ್-ಸವಣೂರು ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದ ಬೊಮ್ಮಾಯಿಗೆ ಈ ಬಾರಿ ವರವಾಗುವ ಅಥವಾ ಕಾಡುವ ಅಂಶಗಳೇನು? ಈ ಪ್ರಭಾವಿ ನಾಯಕನ ರಾಜಕೀಯ ನಡೆಗಳೇನು?

ಈ ಸಲದ ಚುನಾವಣೆಯೇ ಬೇರೆ: 

ಶಿಗ್ಗಾಂವ್-ಸವಣೂರು ಕ್ಷೇತ್ರದಿಂದ ಹಿಂದಿನ ಮೂರು ಬಾರಿ 

ಬಸವರಾಜ ಬೊಮ್ಮಾಯಿ ಗೆದ್ದಿರುವುದೇ ಮುಂದಿನ ಚುನಾವಣೆ ಯಲ್ಲೂ ಅವರ ಕೈಹಿಡಿಯುತ್ತದೆ ಎನ್ನಲಾಗದು. ಈವರೆಗಿನ ಚುನಾವಣೆಗಳದ್ದೇ ಒಂದು ಲೆಕ್ಕವಾದರೆ, ಬರುವ ಚುನಾವಣೆಯದ್ದೇ ಇನ್ನೊಂದು ಲೆಕ್ಕ ಎಂದು ಹೇಳಲಾಗುತ್ತಿದೆ.

ಶಿಗ್ಗಾಂವ್-ಸವಣೂರು ಕ್ಷೇತ್ರಕ್ಕೂ ಪಕ್ಕದ ಕುಂದಗೋಳ ಕ್ಷೇತ್ರಕ್ಕೂ ಒಂದು ವಿಶೇಷ ನಂಟು. ಈವರೆಗೆ ಇಲ್ಲಿ ನಡೆದುಕೊಂಡು ಬಂದದ್ದು 
ಒಳ ಒಪ್ಪಂದದ ರಾಜಕಾರಣ. ಕುಂದಗೋಳ ಕ್ಷೇತ್ರದ ಶಾಸಕರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದ ಬಳಿಕ ಕ್ಷೇತ್ರದ ಚಿತ್ರಣ ಬದಲಾಯಿತು. ಶಿವಳ್ಳಿ ಕುರುಬ ಜಾತಿಗೆ ಸೇರಿದವರಾಗಿದ್ದರು. ಕುಂದಗೋಳದಲ್ಲಿ ಪಂಚಮಸಾಲಿ ಅಂದರೆ ಸಾದರ ಮತಗಳು ನಿರ್ಣಾಯಕ. ಈ ಜಾತಿಯ ಮತಗಳು ಸ್ವತಃ ಸಾದರ ಸಮುದಾಯದವರಾದ ಬೊಮ್ಮಾಯಿ ನಡೆಯ ಮೇಲೆ ನಿಂತಿವೆ. ಕುಂದಗೋಳದಲ್ಲಿ ಪಂಚಮಸಾಲಿ ಮತಗಳು ಕಾಂಗ್ರೆಸ್‌ಗೆ ಮತ್ತು ಶಿಗ್ಗಾಂವ್-ಸವಣೂರು ಕ್ಷೇತ್ರದ ಕುರುಬ ಜಾತಿಯ ಮತಗಳು ಬಿಜೆಪಿಗೆ ಅನ್ನುವ ಸೂತ್ರದಡಿಯಲ್ಲಿ ಈವರೆಗಿನ ರಾಜಕೀಯ ರಣತಂತ್ರ ನಡೆದು ಬಂದಿತ್ತು. ಆದರೆ ಇನ್ನು ಈ ಸೂತ್ರ ಕೆಲಸ ಮಾಡದು ಎಂಬುದು ಬೊಮ್ಮಾಯಿ ಅವರಿಗೆ ಮನವರಿಕೆಯಾಗಿದೆ.

ಪೂರ್ಣ ಬದಲಾಗಲಿದೆಯೇ ಅಖಾಡದ ಸ್ವರೂಪ?

ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಸೋಮಣ್ಣ ಬೇವಿನ ಮರದ. ಅವರೀಗ ಕಾಂಗ್ರೆಸ್ ಸೇರಿದ್ದಾರೆ. ಈ ಸಲದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಅವರೂ ಒಬ್ಬರು. ಉಳಿದಂತೆ ಕಾಂಗ್ರೆಸ್ ಟಿಕೆಟ್ ಬಯಸಿರುವವರ ಸಾಲಿನಲ್ಲಿ ಪ್ರಮುಖವಾಗಿ ಮಾಜಿ ಶಾಸಕ 

ಸಯ್ಯದ್ ಅಝೀಮ್ ಪೀರ್ ಖಾದ್ರಿ, ದಿ.ಸಿ.ಎಸ್.ಶಿವಳ್ಳಿ ಅವರ ಸಹೋದರನಾಗಿರುವ ಷಣ್ಮುಖ ಶಿವಳ್ಳಿ ಹಾಗೂ ಶ್ರೀಕಾಂತ ದುಂಡಿಗೌಡರ್ ಇದ್ದಾರೆ.
ಮೂಲ ಕಾಂಗ್ರೆಸಿಗರು ಹಾಗೂ ವಲಸೆ ಕಾಂಗ್ರೆಸಿಗರ ನಡುವೆ ಭಾರೀ ಪೈಪೋಟಿ ಇದ್ದು, ಸತತ ನಾಲ್ಕು ಬಾರಿ ಸೋತಿರುವ, ಆದರೆ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಖಾದ್ರಿ ಈ ಸಲ ಪ್ರಬಲ ಸ್ಪರ್ಥಿ ಎನ್ನಲಾಗುತ್ತಿದೆ. ಡಿ.ಕೆ ಶಿವಕುಮಾರ್ ಬಣದಲ್ಲಿ ಗುರುತಿಸಿ ಕೊಂಡಿರುವವರು ಷಣ್ಮುಖ ಶಿವಳ್ಳಿ. ಕಾಂಗ್ರೆಸ್‌ನಿಂದ ಖಾದ್ರಿ ಮತ್ತು ಬಿಜೆಪಿಯಿಂದ ಬೊಮ್ಮಾಯಿ ಮಧ್ಯೆ ಫೈಟ್ ನಡೆದರೆ ಬೊಮ್ಮಾಯಿ ಗೆಲುವು ಬಹಳ ಕಷ್ಟ. ಒಂದು ವೇಳೆ, ಖಾದ್ರಿ ಬಿಟ್ಟು ಬೇರೆಯವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಬೊಮ್ಮಾಯಿ ಗೆಲುವು ಸುಲಭವಾಗಲಿದೆ ಎಂಬ ತರ್ಕಗಳು ಸದ್ಯ ಚಾಲ್ತಿಯಲ್ಲಿವೆ.

ನಾಲ್ಕು ಬಾರಿ ಸೋತಿರುವ ಖಾದ್ರಿಯವರಿಗೆ ಟಿಕೆಟ್ 

ಈ ಬಾರಿ ಬೇಡ ಎಂಬುದು ಪಕ್ಷದ ತೀರ್ಮಾನ ವಾದರೆ ಸನ್ನಿವೇಶ ಬದಲಾಗಲಿದೆ. ಖಾದ್ರಿ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಮುಸ್ಲಿಮ್ ಮತಗಳು ಖಾದ್ರಿಯವರ ಅಂಕೆಯಲ್ಲಿರುತ್ತವೆ. ಸೋಮಣ್ಣ ಅಥವಾ ಬೇರೆಯವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಮುಸ್ಲಿಮ್ ಮತಗಳು ವಿರುದ್ಧವಾಗುವ ಚಾನ್ಸ್ 
ಹೆಚ್ಚಿದೆ. ಸ್ಥಳೀಯ ಕಾಂಗ್ರೆಸ್ ನಾಯಕರ ಮೇಲಿನ ಕೋಪಕ್ಕೆ ಮುಸ್ಲಿಮ್ ಮತಗಳು ಬಿಜೆಪಿಗೆ ಹೊದರೂ ಅಚ್ಚರಿ ಯೇನಿಲ್ಲ ಎನ್ನಲಾಗುತ್ತಿದೆ. ಖಾದ್ರಿ ರೆಬಲ್ ಆಗಿ ಜೆಡಿಎಸ್ ಮೊರೆಹೋಗಿ ಸ್ಪರ್ಧೆ ಮಾಡಿದರೆ ತ್ರಿಕೋನ ಸ್ಪರ್ಧೆಯಲ್ಲಿ ಖಾದ್ರಿಗೆ ಅನುಕೂಲವಾಗುವುದು ಖಂಡಿತವೆನ್ನಲಾಗುತ್ತಿದೆ.

 ಬೊಮ್ಮಾಯಿಗೆ ಮೈನಸ್ ಆಗಬಹುದಾದ ಅಂಶಗಳೇನು?: 

ಬೊಮ್ಮಾಯಿ ಸಿಎಂ ಆದ ಬಳಿಕ ಅವರು ತೋರಿದ ನಡೆಗಳೇ ಅವರಿಗೆ ಮುಳುವಾಗುವ ಸಾಧ್ಯತೆ ಮುಸ್ಲಿಮ್ ಮತಗಳು ಹೆಚ್ಚಿರುವ ಈ ಕ್ಷೇತ್ರ 
ದಲ್ಲಿ ಕಾಣಿಸತೊಡಗಿದೆ. ಹಿಜಾಬ್ ವಿವಾದ, ಪಠ್ಯಪುಸ್ತಕ, ಹಾಲ್, ಟಿಪ್ಪು ಮೊದಲಾದ ವಿಚಾರಗಳಲ್ಲಿನ ಬೊಮ್ಮಾಯಿ ನಡೆ, ಅವರ ಇತ್ತೀಚಿನ ಮಾತಿನ ವೈಖರಿ ಇವೆಲ್ಲವೂ ಚುನಾವಣೆ ಹೊತ್ತಲ್ಲಿ ಪರಿಣಾಮ ಬೀರುವ ಸಂಭವ ಹೆಚ್ಚಿದೆ.

ಶಿಗ್ಗಾಂವ್-ಸವಣೂರು ಕ್ಷೇತ್ರದ ಮಾಜಿ ಶಾಸಕ ರಾಜಶೇಖರ ಸಿಂಧೂರ ಅಕಾಲಿಕ ಮರಣ ಕೂಡ ಬಿಜೆಪಿಗೆ ಪೆಟ್ಟುಕೊಡುವ ಸಾಧ್ಯತೆ ಹೆಚ್ಚು. ತಮ್ಮ ಬೀಡಿ ಉದ್ಯಮದಲ್ಲಿ ದುಡಿಯುತ್ತಿದ್ದ ಮುಸ್ಲಿಮ್ ಕೆಲಸಗಾರರ ಮತಗಳು ಬಿಜೆಪಿಗೆಬರುವಂತೆ ಮಾಡುವಲ್ಲಿ ಸಿಂಧೂರ ಅವರ ಪಾತ್ರವಿರುತ್ತಿತ್ತು. ಕಳೆದ ಚುನಾವಣೆಯಲ್ಲಿ ಬೊಮ್ಮಾಯಿ ಜೊತೆ ಅವರು ಭಿನ್ನಾಭಿಪ್ರಾಯ ತಳೆದಿದ್ದರಾದರೂ ಬಳಿಕ ಅವರ ಮನವೊಲಿಸಿ ನೆರವು ಪಡೆಯುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಸಿಂಧೂರ ಕಾರಣದಿಂದ ಬರುತ್ತಿದ್ದ ಮುಸ್ಲಿಮ್ ಮತಗಳು ಬಿಜೆಪಿಗೆ ಬರಲಾರವು. ಈ ಅಂಶವೂ ಬಿಜೆಪಿಗೆ ಹಿನ್ನಡೆಯಾಗಿ ಪರಿಣಮಿಸಬಹುದು.

‘ಬಾಂಬೆ ಟೀಮ್’ ಸರಕಾರ ರಚಿಸಿದ ನಂತರ ಕ್ಷೇತ್ರದಲ್ಲಿ ಬೊಮ್ಮಾಯಿ ಸಾರ್ವಜನಿಕರ ಕೈಗೆ ಸಿಗದಿರುವುದು ಕೂಡ ಅವರ ಮೇಲೆ ಅಸಮಾ ಧಾನ ಮೂಡಿಸಿರುವ ಸಂಗತಿಯಾಗಿದೆ. ಇನ್ನು, ಕ್ಷೇತ್ರದಲ್ಲಿನ ಬೊಮ್ಮಾಯಿ ಕೆಲಸದ ಬಗ್ಗೆ ಜನರಲ್ಲಿ ಅಸಮಾಧಾನ ಇಲ್ಲವಾದರೂ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಂತದಲ್ಲಿ ಬೊಮ್ಮಾಯಿ ಬಗ್ಗೆ ಕಾರ್ಯಕರ್ತರಲ್ಲಿ, ಬೊಮ್ಮಾಯಿ ಕೆಳಹಂತದ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ ಎಂಬ ಸಿಟ್ಟಿದೆ.

ಪಂಚಮಸಾಲಿ ‘ದಾಳ’ವಾಗಿ ಕಾಂಗ್ರೆಸ್‌ನಿಂದ ವಿನಯ್ ಕುಲಕರ್ಣಿ? 

ಬೊಮ್ಮಾಯಿಗೆ ಈ ಸಲ ದೊಡ್ಡ ಭೀತಿಯೆದುರಾಗಿರುವುದೇ ಪಂಚಮಸಾಲಿ ಲಿಂಗಾಯತ ಸಮುದಾಯ 2ಎ ಮೀಸಲಾತಿಗಾಗಿ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಸಮಯದಿಂದ ನಡೆಸುತ್ತಿರುವ ಪ್ರತಿಭಟನೆ. ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿಯ ವರಂತೂ ಈ ವಿಚಾರದಲ್ಲಿ ಸಿಎಂಗೆ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದಾರೆ. ಪಂಚಮಸಾಲಿ ಸಮುದಾಯದ ಕೋಪ ಎಲ್ಲಿ ತನ್ನನ್ನು ಸೋಲಿನೆಡೆಗೆ ತಳ್ಳುತ್ತದೊ ಎಂಬ ಆತಂಕ ಬೊಮ್ಮಾಯಿಯವರನ್ನು ಕಾಡುತ್ತಿದೆ.

ಸರಿಯಾಗಿ ಈ ಹೊತ್ತಲ್ಲೇ ಪಂಚಮಸಾಲಿ ನಾಯಕರೆಲ್ಲ ಸೇರಿ ಒಂದು ತಂತ್ರ ಹೂಡಲು ಹೊರಟಿದ್ದಾರೆ. ಪಂಚಮಸಾಲಿ ಸಮುದಾ ಯದ ವಿನಯ್ ಕುಲಕರ್ಣಿ ಅವರನ್ನು ಶಿಗ್ಗಾಂವ್-ಸವಣೂರು ಕ್ಷೇತ್ರಕ್ಕೆ ಕರೆತಂದು ಬೊಮ್ಮಾಯಿಯೆದುರು ಕಣಕ್ಕಿಳಿಸುವುದು ಆ ತಂತ್ರ. ಈಗಾಗಲೇ ಇಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿರುವ ಸೋಮಣ್ಣ ಬೇವಿನಮರದ ಮತ್ತು ಶ್ರೀಕಾಂತ್ ದುಂಡಿಗೌಡರ್ ಇಬ್ಬರೂ ಪಂಚಮಸಾಲಿ ಸಮುದಾಯದವರೇ ಆಗಿದ್ದರೂ ಪ್ರಭಾವಿ ಗಳಲ್ಲ.

ಗೆಲ್ಲುವ ಸಾಧ್ಯತೆ ಕಡಿಮೆ. ಆದರೆ ವಿನಯ್ ಕುಲಕರ್ಣಿಯವರು ಅಖಾಡಕ್ಕಿಳಿದರೆ ಬೊಮ್ಮಾಯಿಗೆ ಸೋಲು ಖಚಿತ ಎನ್ನಲಾಗುತ್ತಿದೆ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಕುಲಕರ್ಣಿ ಬಗ್ಗೆ ಒಳ್ಳೆಯ ಹೆಸರಿದೆ.ವಿನಯ್ ಕುಲಕರ್ಣಿಯವರನ್ನು ಈ ಕ್ಷೇತ್ರಕ್ಕೆ ಕರೆತರುವ ತಂತ್ರಗಾರಿಕೆಯಲ್ಲಿ ಪಂಚಮಸಾಲಿ ನಾಯಕರಾದ ಕಾಶೆಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಎಂ.ಬಿ.ಪಾಟೀಲ್ ಇದ್ದು, ಬಿಜೆಪಿಯ ಬಸನಗೌಡ ಪಾಟೀಲ್ 

ಯತ್ನಾಳ್ ಅವರೂ ಇದನ್ನು ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ. ಪಂಚಮಸಾಲಿ ಮತ್ತು ಮುಸ್ಲಿಮ್ ಮತಗಳ ಕ್ರೋಡೀಕರಣದೊಂದಿಗೆ ವಿನಯ್ ಗೆಲುವು ಸಾಧ್ಯವಾಗಲಿದೆ ಮತ್ತು ಆ ಮೂಲಕ ಪಂಚಮ ಸಾಲಿ ನಾಯಕರು ಪ್ರಬಲರು ಎಂಬ ಸಂದೇಶವನ್ನು ಮುಟ್ಟಿಸುವುದು ಈ ನಡೆಯ ಉದ್ದೇಶ.

ಎರಡನೇ ಕ್ಷೇತ್ರವಾಗಿ ಯಾವುದನ್ನು ನೆಚ್ಚುತ್ತಾರೆ ಬೊಮ್ಮಾಯಿ?

ರಾಜಕೀಯ ತಂತ್ರಗಳು ಹೀಗೆಲ್ಲಾ ಬದಲಾದರೆ, ಕಡೇ ಕ್ಷಣದಲ್ಲಿ ಬೊಮ್ಮಾಯಿ ತಮ್ಮ ರಾಜಕೀಯ ಉಳಿವಿನ ಹೆಜ್ಜೆಯಾಗಿ ಮತ್ತೊಂದು ಕ್ಷೇತ್ರವನ್ನು ಅವಲಂಬಿಸಿದರೆ ಅಚ್ಚರಿಯೇನಿಲ್ಲ. ಸತತ ಮೂರು ಬಾರಿ ತಮ್ಮ ಕೈಹಿಡಿದಿದ್ದ ಶಿಗ್ಗಾಂವ್-ಸವಣೂರು ಕ್ಷೇತ್ರದಲ್ಲಿ ಈ ಸಲ ದೊಡ್ಡ ಸವಾಲಿನ ಆತಂಕವನ್ನು ಒಳಗೊಳಗೇ ಎದುರಿಸುತ್ತಿರುವ ಬೊಮ್ಮಾಯಿ, ಇದೇ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟನೆ 
ಕೊಡುತ್ತಲೇ ಬಂದಿದ್ದಾರೆ. ಆದರೂ ಬೇರೆ ಕ್ಷೇತ್ರವನ್ನು ಹುಡುಕಿಕೊಳ್ಳ ಬೇಕಾದ ಅನಿವಾರ್ಯತೆಯೂ ಅವರಿಗೆ ಎದುರಾಗಿದೆ. ರಾಣೆಬೆನ್ನೂರು ಅಥವಾ ಬ್ಯಾಡಗಿ ಕ್ಷೇತ್ರದಲ್ಲಿ ಸ್ಪರ್ಧಿಸಲೂಬಹುದು ಎಂಬ ಮಾತುಗಳಿವೆ.

ಪಂಚಮಸಾಲಿಗಳಲ್ಲಿನ ಸಣ್ಣ ಸಮುದಾಯವಾದ ಸಾದರ ಪಂಗಡದ ಬೊಮ್ಮಾಯಿ ಬಗ್ಗೆ ಸಮುದಾಯದ ಇತರ ಒಳಪಂಗಡಗಳ ನಾಯಕರೆಲ್ಲರ ಅಸಮಾಧಾನವೂ ಒಟ್ಟುಗೂಡಿರುವುದು ಈ ಸಲದ ಸಮೀಕರಣವನ್ನೇ ಬದಲಿಸಲಿದೆ. ಬೊಮ್ಮಾಯಿ ಅವರು ಶಿಗ್ಗಾಂವ್-ಸವಣೂರು ಕ್ಷೇತ್ರದಲ್ಲಿ ಸ್ಪರ್ಧಿಸುವುದರ ಜೊತೆಗೇ ರಕ್ಷಣಾತ್ಮಕವಾಗಿ ರಾಣೆಬೆನ್ನೂರು ಅಥವಾ ಬ್ಯಾಡಗಿ ಇವೆರಡರಲ್ಲಿ ಒಂದನ್ನು ಆಯ್ದುಕೊಂಡು ಕಣಕ್ಕಿಳಿಯುವ ಸಾಧ್ಯತೆಯೂ ಇದೆ.

ಇದೆಲ್ಲದರ ಆಚೆಗೂ ಚುನಾವಣೆಗೆ ಇನ್ನೆರಡೇ ದಿನ ಇದೆಯೆನ್ನು ವಾಗ ರಾಜಕಾರಣಿಗಳು ಆಡುವ ‘ಘೋಡಾ ಹೈ ಮೈದಾನ್ ಹೈ’ ಆಟದಲ್ಲೂ ಹಿಂದಿರುವವರಲ್ಲ ಬಸವರಾಜ ಬೊಮ್ಮಾಯಿ. ಅಂತೂ ಆಟ ಹೇಗಿರಲಿದೆ ಎಂಬುದನ್ನು ನೋಡಬೇಕು, ಅಷ್ಟೆ.

ಬಸವರಾಜ ಬೊಮ್ಮಾಯಿ 

ಬಸವರಾಜ್ ಬೊಮ್ಮಾಯಿ. ಈಗ 62 ವರ್ಷ. ಯಡಿಯೂರಪ್ಪ ನವರ ಉತ್ತರಾಧಿಕಾರಿಯಾಗಿ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ಆಯ್ಕೆಯಾದ ಬೊಮ್ಮಾಯಿ 2021ರ ಜುಲೈ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮೂಲತಃ ಜನತಾ ಪರಿವಾರದ ಈ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ. 1998 ಹಾಗೂ 2004ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 2008ರಲ್ಲಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ಬೊಮ್ಮಾಯಿ, ಅದೇ ವರ್ಷ ಶಿಗ್ಗಾಂವ್-ಸವಣೂರು ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರು. 2013 ಮತ್ತು 2018ರಲ್ಲಿ ಅದೇ ಕ್ಷೇತ್ರದಿಂದಲೇ ಪುನರಾಯ್ಕೆ. ಗೃಹಖಾತೆ ಜವಾಬ್ದಾರಿ ಹೊತ್ತಿದ್ದಾಗಲೇ ಸಿಎಂ ಆಗುವ ಅವಕಾಶವೂ ಒದಗಿಬಂತು.

ಜಲಸಂಪನ್ಮೂಲ, ಕಾನೂನು ಮತ್ತು ಸಂಸದೀಯ, ಗೃಹ ಖಾತೆ ಹೀಗೆ ಆಡಳಿತಾನುಭವವುಳ್ಳ ಬೊಮ್ಮಾಯಿ, ಒಮ್ಮೆ ಧಾರವಾಡದ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿದ್ದರು. 2007 ರಲ್ಲಿ ಧಾರವಾಡದಿಂದ ನರಗುಂದದವರೆಗೆ ರೈತರೊಂದಿಗೆ 232 ಕಿ.ಮೀ. ಪಾದಯಾತ್ರೆ ನಡೆಸಿದ್ದರು.
ಸಂಘಪರಿವಾರದ ಹಿನ್ನೆಲೆಯವರಲ್ಲದ ಬೊಮ್ಮಾಯಿ, ಬಿಜೆಪಿಗೆ ಬಂದು 14 ವರ್ಷಗಳಾಗಿವೆ. ಪಕ್ಷದ ಸಿದ್ಧಾಂತಕ್ಕೆ ಒಗ್ಗಿಕೊಂಡಿದ್ದಾರೆ. ಒಂದು ಹಂತದವರೆಗೆ ಹಿಂದುತ್ವನಿಲುವನ್ನು ಬಹಿರಂಗವಾಗಿ ತೋರಿಸಿ ರದ ಅವರು, ನಿಧಾನವಾಗಿ ತುಸು ಆಕ್ರಮಣಕಾರಿ ಧಾಟಿಯಲ್ಲಿ ಮಾತನಾಡುವುದನ್ನು ರೂಢಿಸಿ ಕೊಂಡರು. ಮುಖ್ಯಮಂತ್ರಿ ಹುದ್ದೆಯತ್ತ ಹೋಗುವುದಕ್ಕೆ ಅದರ ಅನಿವಾರ್ಯತೆ ಕಂಡಾಗಿನಿಂದ ಶುರುವಾದ ಅವರ ಈ ನಡೆ, ಮುಖ್ಯಮಂತ್ರಿಯಾದ ಬಳಿಕ ವಂತೂ ಹಿಂದುತ್ವದ ರಾಜಕೀಯ ಪ್ರದರ್ಶಿಸುವುದರಲ್ಲಿ ಹಿಂದೆ ಬೀಳಲಿಲ್ಲ. ಅವರು ಆಗಾಗ ನೀಡುವ ಹೇಳಿಕೆಗಳು ಹಿಂದುತ್ವ ನಿಲುವಿನವರ ವರ್ತನೆಗಳನ್ನು ಸಮರ್ಥಿಸಿ ಕೊಳ್ಳುವಂತೆ ಇರುವು ದನ್ನೂ ಗಮನಿಸಬಹುದು.

ಜಾತಿ ಸಮೀಕರಣ 

ಶಿಗ್ಗಾಂವ್-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಸುಮಾರು 2,06,859 ಮತದಾರರಿದ್ದಾರೆ. ಇವರಲ್ಲಿ ಪುರುಷ ಮತದಾರರು 1,04,799 ಮತ್ತು ಮಹಿಳಾ ಮತದಾರರು 1,02,060.ಜಾತಿ ಲೆಕ್ಕಾಚಾರಕ್ಕೆ ಬಂದರೆ ಇಲ್ಲಿಯೂ ಲಿಂಗಾಯತರದ್ದೇ, ಅದರಲ್ಲೂ ಪಂಚಮಸಾಲಿಗಳದ್ದೇ ಪ್ರಾಬಲ್ಯ. ನಂತರದ ಸ್ಥಾನದಲ್ಲಿ ಬರುವ ಮುಸ್ಲಿಮ್ ಮತಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಲಿಂಗಾಯತ ಸಮುದಾಯದ ಹಲವಾರು ಒಳಪಂಗಡಗಳಲ್ಲಿ ಒಂದಾದ ಸಾದರ ಸಮುದಾಯಕ್ಕೆ ಸೇರಿದವರು.
ಲಿಂಗಾಯತ  - ಸುಮಾರು 61 ಸಾವಿರ
ಮುಸ್ಲಿಮ್ - ಸುಮಾರು 50 ಸಾವಿರ
ಕುರುಬ - ಸುಮಾರು 30 ಸಾವಿರ
ಲಂಬಾಣಿ - ಸುಮಾರು 20 ಸಾವಿರ
ದಲಿತರು - ಸುಮಾರು 22 ಸಾವಿರ


Similar News