ಮಧ್ಯಪ್ರದೇಶ: ಅತ್ಯಾಚಾರ ಆರೋಪದ ಮೇಲೆ ಕಾಂಗ್ರೆಸ್ ಶಾಸಕನ ವಿರುದ್ಧ ಪ್ರಕರಣ ದಾಖಲು

Update: 2022-11-21 08:17 GMT

ಧಾರ್: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ರವಿವಾರ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಧಾರ್ ಜಿಲ್ಲೆಯ ಗಂಧ್ವಾನಿ ಕ್ಷೇತ್ರದ ಶಾಸಕ ಸಿಂಘಾರ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು) ಮತ್ತು 498 (ವಿವಾಹಿತ ಮಹಿಳೆಯನ್ನು ಆಮಿಷ ಒಡ್ಡುವುದು/ಕರೆದುಕೊಂಡು ಹೋಗುವುದು/ಅಪರಾಧಿ ಉದ್ದೇಶದಿಂದ ಬಂಧಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಂಘಾರ್ ಅವರ ಪತ್ನಿಯಾಗಿ ತಾನು ವಾಸಿಸುತ್ತಿದ್ದೇನೆ ಎಂದು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಧಾರ್‌ನ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಪ್ರತಾಪ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ಮಾಜಿ ರಾಜ್ಯ ಅರಣ್ಯ ಸಚಿವರು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಮತ್ತು ದೈಹಿಕವಾಗಿ ಹಿಂಸಿಸಿದ್ದರು ಎಂದು ದೂರುದಾರರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಜ್ಯ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಅಧ್ಯಕ್ಷ ಕೆಕೆ ಮಿಶ್ರಾ ಅವರು ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಪ್ರಾಥಮಿಕವಾಗಿ ಆರೋಪಗಳು ರಾಜಕೀಯ ಪ್ರೇರಿತ ಎಂದು ತೋರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

Similar News