ರಾಜೀವ್ ಗಾಂಧಿ ಹಂತಕರ ಬಿಡುಗಡೆ: ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಲು ಕಾಂಗ್ರೆಸ್ ಸಜ್ಜು
ಹೊಸದಿಲ್ಲಿ,ನ.21: ಮಾಜಿ ಪ್ರಧಾನಿ ರಾಜೀವ ಗಾಂಧಿ(Rajiv Gandhi) ಹತ್ಯೆ ಪ್ರಕರಣದ ದೋಷಿಗಳ ಬಿಡುಗಡೆಯನ್ನು ಪ್ರಶ್ನಿಸಿ ತಾನು ಹೊಸದಾಗಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವುದಾಗಿ ಕಾಂಗ್ರೆಸ್(Congress) ಸೋಮವಾರ ಹೇಳಿದೆ. 10 ದಿನಗಳ ಹಿಂದೆ ಈ ಆರು ಜನರು ತಮಿಳುನಾಡಿನ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ರಾಜೀವ ಗಾಂಧಿ ಹಂತಕರ ಬಿಡುಗಡೆಯು ದುರದೃಷ್ಟಕರ ಮತ್ತು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು.
ಕೇಂದ್ರ ಸರಕಾರವೂ ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿ ಬಿಡುಗಡೆ ಆದೇಶವನ್ನು ಪುನರ್ಪರಿಶೀಲಿಸುವಂತೆ ಕೋರಿದೆ.
ಕೇಂದ್ರ ಸರಕಾರವು ಸಲ್ಲಿಸಿರುವ ಅರ್ಜಿಯಲ್ಲಿ ಮಧ್ಯ ಪ್ರವೇಶಿಸಬೇಕೇ ಅಥವಾ ಪ್ರತ್ಯೇಕ ಪುನರ್ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕೇ ಎಂಬ ಬಗ್ಗೆ ನಾವು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ನ್ಯಾಯವಾದಿ ಅಭಿಷೇಕ ಮನು ಸಿಂಘ್ವಿ(Abhishek Manu Singhvi)ಯವರು ಸುದ್ದಿಸಂಸ್ಥೆಗೆ ತಿಳಿಸಿದರು.
ತನ್ನ ಅಹವಾಲು ಆಲಿಕೆಗೆ ಸಾಕಷ್ಟು ಕಾಲಾವಕಾಶ ನೀಡದೇ ದೋಷಿಗಳ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ. ಇದು ಸಹಜ ನ್ಯಾಯದ ತತ್ತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ವಾಸ್ತವದಲ್ಲಿ ನ್ಯಾಯದ ವಿಫಲತೆಗೆ ಕಾರಣವಾಗಿದೆ ಎಂದು ಕೇಂದ್ರವು ವಾದಿಸಿದೆ.
ನಾಲ್ವರು ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿದ್ದನ್ನು ರಾಜೀವ ಗಾಂಧಿಯವರ ಪತ್ನಿ ಹಾಗೂ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಬೆಂಬಲಿಸಿದ್ದರು. ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಜೈಲಿನಲ್ಲಿ ಅಪರಾಧಿಗಳ ಪೈಕಿ ನಳಿನಿಯನ್ನು ಭೇಟಿಯಾಗಿ ಕ್ಷಮಿಸಿದ್ದರು. ಆದರೆ ಗಾಂಧಿ ಕುಟುಂಬಕ್ಕೆ ಭಿನ್ನವಾದ ನಿಲುವು ತಳೆದಿರುವ ಪಕ್ಷವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.