ಶಿವಾಜಿ ವಿವಾದ: ಮಹಾರಾಷ್ಟ್ರ ರಾಜ್ಯಪಾಲರ ಎತ್ತಂಗಡಿಗೆ ಶಿಂಧೆ ಬಣದ ಶಾಸಕನ ಆಗ್ರಹ
ಮುಂಬೈ,ನ.21: ಛತ್ರಪತಿ ಶಿವಾಜಿ ಮಹಾರಾಜ(Chhatrapati Shivaji Maharaja)ರ ಕುರಿತು ಹೇಳಿಕೆಗಾಗಿ ಮಹಾರಾಷ್ಟ್ರ ರಾಜ್ಯಪಾಲ ಭಗತಸಿಂಗ್ ಕೋಶ್ಯಾರಿ(Bhagatsingh Koshyari)ಯವರನ್ನು ರಾಜ್ಯದಿಂದ ಎತ್ತಂಗಡಿ ಮಾಡುವಂತೆ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde)ನೇತೃತ್ವದ ಶಿವಸೇನೆ ಬಣದ ಶಾಸಕ ಸಂಜಯ ಗಾಯಕ್ವಾಡ್ (Sanjay Gaikwad)ಅವರು ಸೋಮವಾರ ಆಗ್ರಹಿಸಿದ್ದಾರೆ.
ರಾಜ್ಯಪಾಲರು ಹಿಂದೆಯೂ ಮರಾಠಾ ಸಾಮ್ರಾಜ್ಯದ ಸ್ಥಾಪಕ ಶಿವಾಜಿಯಯವರ ಕುರಿತು ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸಿದ್ದರು ಎಂದು ಹೇಳಿದ ಬುಲ್ಡಾಣಾ ಕ್ಷೇತ್ರದ ಶಾಸಕ ಗಾಯಕ್ವಾಡ್,‘ಶಿವಾಜಿ ಮಹಾರಾಜರ ಆದರ್ಶಗಳು ಎಂದಿಗೂ ಹಳತಾಗುವುದಿಲ್ಲ ಎನ್ನುವುದನ್ನು ರಾಜ್ಯಪಾಲರು ಅರ್ಥ ಮಾಡಿಕೊಳ್ಳಬೇಕು. ಜಗತ್ತಿನ ಇತರ ಯಾವುದೇ ಮಹಾನ್ ವ್ಯಕ್ತಿಯೊಂದಿಗೆ ಶಿವಾಜಿ ಮಹಾರಾಜರನ್ನು ಹೋಲಿಸುವಂತಿಲ್ಲ. ರಾಜ್ಯದ ಇತಿಹಾಸ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಗೊತ್ತಿಲ್ಲದ ವ್ಯಕ್ತಿಯನ್ನು ಬೇರೆ ಎಲ್ಲಾದರೂ ಎತ್ತಂಗಡಿ ಮಾಡುವಂತೆ ನಾನು ಕೇಂದ್ರದಲ್ಲಿಯ ಬಿಜೆಪಿ ನಾಯಕರನ್ನು ಕೋರಿಕೊಳ್ಳುತ್ತೇನೆ ’ಎಂದರು.
ಶನಿವಾರ ಔರಂಗಾಬಾದ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ (Dr. Babasaheb Ambedkar)ಮರಾಠವಾಡಾ ವಿವಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೋಶ್ಯಾರಿ, ಶಿವಾಜಿ ಮಹಾರಾಜರು ‘ಹಳೆಯ ಐಕಾನ್ ’ ('An Old Icon')ಆಗಿದ್ದಾರೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ರಿಂದ ಹಿಡಿದು ನಿತಿನ್ ಗಡ್ಕರಿವರೆಗೆ ಹಲವರಲ್ಲಿ ‘ಹೊಸ ಐಕಾನ್ ’('New Icon')ಗಳನ್ನು ಕಾಣಬಹುದು ಎಂದು ಹೇಳಿದ್ದರು. ಇದು ರಾಜ್ಯದಲ್ಲಿ ತೀವ್ರ ವಿವಾದವನ್ನು ಸೃಷ್ಟಿಸಿದೆ.