×
Ad

ಕೆಲವರು ಅಧಿಕಾರಕ್ಕೆ ಮರಳಲು ಪಾದಯಾತ್ರೆ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ‌

Update: 2022-11-21 22:07 IST

ಸುರೇಂದ್ರನಗರ (ಗುಜರಾತ್),ನ.21: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಯವರ ಭಾರತ ಜೋಡೊ ಯಾತ್ರೆಯ ಬಗ್ಗೆ ಸೋಮವಾರ ಇಲ್ಲಿ ವ್ಯಂಗ್ಯವಾಡಿದ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು, ಅಧಿಕಾರದಿಂದ ಕಿತ್ತೊಗೆಯಲ್ಪಟ್ಟವರು ಮತ್ತೆ ಅಧಿಕಾರಕ್ಕೆ ಮರಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.

‌ಇಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು, ಈಗ ಕಾಂಗ್ರೆಸ್ ಚುನಾವಣೆಗಳ ಸಂದರ್ಭದಲ್ಲಿ ಅಭಿವೃದ್ಧಿಯ ಕುರಿತು ಮಾತನಾಡುವುದಿಲ್ಲ, ಬದಲಿಗೆ ಮೋದಿಗೆ ಅವರ ‘ಔಕಾತ್(ಸ್ಥಾನಮಾನ)’(Status) ಏನು ಎನ್ನುವುದನ್ನು ತೋರಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅವರ ದುರಂಹಕಾರವನ್ನು ನೋಡಿ. ನಿಜಕ್ಕೂ ಅವರು ರಾಜಮನೆತನಕ್ಕೆ ಸೇರಿದವರಾಗಿದ್ದಾರೆ ಮತ್ತು ನಾನು ಯಾವುದೇ ಔಕಾತ್ ಇಲ್ಲದ ಕೇವಲ ಸೇವಕನಾಗಿದ್ದೇನೆ’ ಎಂದರು.

‘ಈ ಹಿಂದೆ ಕಾಂಗ್ರೆಸ್ ನನ್ನ ಬಗ್ಗೆ ನೀಚ್ ಆದ್ಮಿ, ಮೌತ್ ಕಾ ಸೌದಾಗರ್ (Mouth Ka Saudagar)ಮತ್ತು ನಾಲಿ ಕಿ ಕೀಡಾ(Nali ki keeda) ಪದಗಳನ್ನು ಬಳಸಿತ್ತು. ಈ ‘ಔಕಾತ್’ನ ಆಟವಾಡುವ ಬದಲು ಅಭಿವೃದ್ಧಿಯ ಕುರಿತು ಮಾತನಾಡುವಂತೆ ನಾನು ಕಾಂಗ್ರೆಸ್ ಅನ್ನು ಆಗ್ರಹಿಸುತ್ತೇನೆ ’ಎಂದ ಮೋದಿ,ಭಾರತವನ್ನು ಶ್ರೀಮಂತ ರಾಷ್ಟ್ರವನ್ನಾಗಿಸುವುದರ ಮೇಲೆ ತನ್ನ ಗಮನವಿದೆ, ಹೀಗಾಗಿ ಇಂತಹ ಅವಮಾನಗಳನ್ನು ತಾನು ಸಹಿಸಿಕೊಳ್ಳುತ್ತೇನೆ ಎಂದರು.

ಬಹಳ ಹಿಂದೆ ಅಧಿಕಾರದಿಂದ ಕೆಳಗಿಳಿಸಲ್ಪಟ್ಟವರು ಮತ್ತೆ ಅಧಿಕಾರಕ್ಕೆ ಮರಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ದಾವೆಗಳ ಮೂಲಕ 40 ವರ್ಷಗಳ ಕಾಲ ನರ್ಮದಾ ಯೊಜನೆಯನ್ನು ತಡೆದಿದ್ದ, 40 ವರ್ಷಗಳ ಕಾಲ ಗುಜರಾತ್ ದಾಹದಿಂದ ತತ್ತರಿಸುವಂತೆ ಮಾಡಿದ್ದವರನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಗುಜರಾತಿನ ಜನರು ಈ ಪಾದಯಾತ್ರೆ ಮಾಡುತ್ತಿರುವವರನ್ನು ದಂಡಿಸಲಿದ್ದಾರೆ. ನರ್ಮದಾ ಯೋಜನೆಗೆ ವಿರುದ್ಧವಾಗಿದ್ದವರನ್ನೂ ಜನರು ದಂಡಿಸುತ್ತಾರೆ ಎಂದು ಯಾರನ್ನೂ ಹೆಸರಿಸದೆ ಮೋದಿ ಹೇಳಿದರು.

ಇತ್ತಿಚಿಗೆ ಮಹಾರಾಷ್ಟ್ರದಲ್ಲಿ ರಾಹುಲ್ ರ ಭಾರತ ಜೋಡೊ ಯಾತ್ರೆಯನ್ನು ಸೇರಿದ್ದ ನರ್ಮದಾ ಬಚಾವೊ (Narmada Bachao)ಆಂದೋಲನ ನಾಯಕಿ ಮೇಧಾ ಪಾಟ್ಕರ್ (Medha Patkar)ಅವರನ್ನು ಪ್ರಸ್ತಾಪಿಸಿ ಮೋದಿಯವರ ಈ ಹೇಳಿಕೆ ಹೊರಬಿದ್ದಿದೆ. ರಾಜ್ಯದಲ್ಲಿ ತಯಾರಾದ ಉಪ್ಪನ್ನು ತಿಂದ ಬಳಿಕವೂ ಕೆಲವರು ಗುಜರಾತನ್ನು ನಿಂದಿಸುತ್ತಿದ್ದಾರೆ ಎಂದೂ ಮೋದಿ ಯಾರನ್ನೂ ಹೆಸರಿಸದೆ ಟೀಕಿಸಿದರು.

Similar News