ಸಾಮರಸ್ಯ ಸಾರುವ ‘ಕುದ್ರು’ ಚಲನಚಿತ್ರ ಫೆ.೧೪ಕ್ಕೆ ಬಿಡುಗಡೆ

Update: 2022-11-21 18:03 GMT

ಉಡುಪಿ, ನ.೨೧: ಮೋಕ್ಷ ಕ್ರಿಯೇಶನ್ಸ್ ಬ್ಯಾನರ್‌ನಡಿ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಮರಸ್ಯದ ಸಂದೇಶ ಹೊಂದಿರುವ ‘ಕುದ್ರು’ ಕನ್ನಡ ಚಲನಚಿತ್ರ ಫೆ.೧೪ರಂದು ರಾಜ್ಯದಾದ್ಯಂತ ಬಿಡುಗಡೆ ಯಾಗಲಿದೆ ಎಂದು ಚಿತ್ರ ನಿರ್ಮಾಪಕ ಭಾಸ್ಕರ್ ನಾಯ್ಕ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಸನ್ನಿವೇಶ, ವಾಟ್ಸ್ಯಾಪ್ ಸಂದೇಶ ಸೃಷ್ಟಿಸುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕುದ್ರು ಚಿತ್ರವನ್ನು ತಯಾರಿಸಲಾಗಿದೆ. ಧರ್ಮಗಳ ಮೌಲ್ಯ, ಧರ್ಮಗಳ ನಡುವಿನ ಸಂಬಂಧ ಹಾಗೂ ಸರ್ವಧರ್ಮ ಸಮನ್ವಯ ಹಾಗೂ ಸಾಮರಸ್ಯದ ಬದುಕಿನ ಸಂದೇಶವನ್ನು ಈ ಸಿನೆಮಾ ಸಾರುತ್ತದೆ ಎಂದರು.

ಉಡುಪಿ ಸಮೀಪದ ಕಲ್ಯಾಣಪುರ, ಕೆಮ್ಮಣ್ಣು ಕುದ್ರು ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ರಾಜಸ್ಥಾನದ ಆಯಿಲ್ ರಿಗ್‌ನಲ್ಲಿಯೂ ಚಿತ್ರೀಕರಣ ಮಾಡಲಾಗಿದೆ. ಒಂದು ಹಾಡನ್ನು ಹೊರತು ಪಡಿಸಿ ಸಿನೆಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಕರಾವಳಿಯ ಪ್ರತಿಭಾವಂತ ಕಲಾವಿದರನ್ನು ಹಾಕಿಕೊಂಡು ಈ ಚಿತ್ರ ಮಾಡಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಮಧು ವೈ.ಜಿ.ಹಳ್ಳಿ, ನಟಿ ಪ್ರಿಯಾ ಹೆಗ್ಡೆ, ಚಿತ್ರ ನಟರಾದ ಫರಾನ್, ಶ್ರೀಪಾದ ಹೆಗಡೆ, ಕೃಷ್ಣ ಆಚಾರ್ಯ, ಚರಣ್ ಮಲ್ಪೆ ಉಪಸ್ಥಿತರಿದ್ದರು.

Similar News