ಖತರ್: ಪ್ರಧಾನ ವಿಶ್ವಕಪ್ ಸ್ಟೇಡಿಯಂಗೂ, ಭಾರತಕ್ಕೂ ನಂಟು..

Update: 2022-12-10 17:48 GMT

ದೋಹಾ: ವಿಶ್ವದ ಯಾವುದೇ ಪ್ರಮುಖ ಫುಟ್ಬಾಲ್ ಸ್ಟೇಡಿಯಂಗೆ ಪ್ರತಿಸ್ಪರ್ಧಿಯಾಗಿ ನಿಲ್ಲಬಲ್ಲ ವಿಶಿಷ್ಟ ಹಾಗೂ ಅತ್ಯಪೂರ್ವ ಖತಾರಿ ಸ್ಟೇಡಿಯಂ ಎನಿಸಿದ ಅಲ್ ಬೈತ್ ಸ್ಟೇಡಿಯಂ ಬಗ್ಗೆ ಫಿಫಾ ವೆಬ್‍ಸೈಟ್‍ನಲ್ಲಿ ಮಹತ್ವದ ವಿವರಗಳಿವೆ.

ದೋಹಾ ನಗರದಿಂದ 46 ಕಿಲೋಮೀಟರ್ ಉತ್ತರಕ್ಕಿರುವ ಅಲ್ ಖೋರ್ ನಗರದಲ್ಲಿರುವ ಈ ಸ್ಟೇಡಿಯಂ ನವೆಂಬರ್ 21ರಂದು ವಿಶ್ವಕಪ್‍ನ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಯಿತು. ಸೆಮಿಫೈನಲ್ ಹಂತದವರೆಗಿನ ಹಲವು ಪಂದ್ಯಗಳು ಇಲ್ಲಿ ನಡೆಯಲಿವೆ. 60 ಸಾವಿರ ಪ್ರೇಕ್ಷಕರನ್ನು ಹಿಡಿದಿಡಬಲ್ಲ ಈ ವಿಶಿಷ್ಟ ಸ್ಟೇಡಿಯಂ, ಈ ಪ್ರದೇಶದಲ್ಲಿ ಸಹಸ್ರಮಾನಗಳಿಂದ ಕಾಲ ವಾಸವಿರುವ ಅಲೆಮಾರಿ ಜನಾಂಗವಾದ ಬೆಡೊಯೂಮ್ ಸಮುದಾಯದ ಟೆಂಟ್‍ಗಳನ್ನು ಹೋಲುತ್ತದೆ. ಸಾಂಪ್ರದಾಯಿಕವಾಗಿ ಈ ಟೆಂಟ್‍ಗಳಿಗೆ ಕಪ್ಪು ಪಟ್ಟಿಗಳು ಇರುತ್ತವೆ. ಅದರಂತೆಯೇ ಅರೇನಾದ ಹೊರಾಂಗಣವನ್ನು ಕೆಂಪು ಮತ್ತು ಕಪ್ಪು ಬಣ್ಣಗಳಿಂದ ರೂಪಿಸಿ ಒಳಾಂಗಣವನ್ನು ವಿಶಿಷ್ಟವಾಗಿ ಅಲಂಕರಿಸಲಾಗಿದೆ.

ಪಿ.ಮೊಹಮ್ಮದ್ ಅಲಿ ಸಹ- ಸಂಸ್ಥಾಪಿಸಿದ ಒಮನ್ ಮೂಲದ ಗಲ್ಫರ್ ಎಂಜಿನಿಯರಿಂಗ್ ಹಾಗೂ ಗುತ್ತಿಗೆ ಕಂಪನಿಯ ಸಹಸಂಸ್ಥೆಯಾದ ಖತಾರಿ ಕಂಪನಿ ಗಲ್ಫರ್ ಅಲ್ ಮಿಶಂದ್ ಇದರ ನಿರ್ಮಾಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿತ್ತು. ಅಲಿ ಮೂಲತಃ ಕೇರಳದ ತ್ರಿಶ್ಶೂರು ಜಿಲ್ಲೆಯವರು. ಮಿಝೋರಾಂನ ಗಡಿ ರಸ್ತೆಗಳ ಸಂಸ್ಥೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು, ಮಧ್ಯಪ್ರಾಚ್ಯಕ್ಕೆ 1970ರ ದಶಕದಲ್ಲಿ ತೆರಳಿದರು. 1972ರಲ್ಲಿ ಗಲ್ಫರ್ ಒಮನ್ ಕಂಪನಿಯನ್ನು ಸ್ಥಾಪಿಸಿದರು. ಇದು ಪ್ರಸ್ತುತ ಮಧ್ಯಪ್ರಾಚ್ಯ ದೇಶಗಳಲ್ಲಿ 100 ಕೋಟಿ ಡಾಲರ್ ವಹಿವಾಟಿನೊಂದಿಗೆ ಪ್ರಮುಖ ಹಾಗೂ ಅತಿದೊಡ್ಡ ನಿರ್ಮಾಣ ಕಂಪನಿಗಳಲ್ಲೊಂದಾಗಿದೆ.

         (ಪಿ.ಮೊಹಮ್ಮದ್ ಅಲಿ)

ಖತರ್ ಸಾಂಸ್ಕೃತಿಕ ಗ್ರಾಮ ಮತ್ತು ದೋಹಾ ಮೆಟ್ರೋ ರೆಡ್ ಲೈನ್ ನಾರ್ತ್, ಈ ಕಂಪನಿಯ ಇತರ ಪ್ರಮುಖ ಯೋಜನೆಗಳಾಗಿವೆ. 400 ಕೋಟಿ ಖತಾರಿ ರಿಯಲ್ (ಸುಮಾರು 8000 ಕೋಟಿ ರೂಪಾಯಿ) ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.

ಸುಸ್ಥಿರತೆ ಮತ್ತು ಕಡಿಮೆ ವಿದ್ಯುತ್ ಬಳಕೆ ಈ ನಿರ್ಮಾಣ ಯೋಜನೆಯ ಪ್ರಮುಖ ತತ್ವವಾಗಿದೆ. ಇದು ಜಾಗತಿಕ ಸುಸ್ಥಿರತೆ ಮೌಲ್ಯಮಾಪನ ವ್ಯವಸ್ಥೆಯಿಂದ 5 ಸ್ಟಾರ್ ಪ್ರಮಾಣಪತ್ರ ಪಡೆದ ಅಲ್ ಬೈತ್ ಸ್ಟೇಡಿಯಂನಲ್ಲಿ ಪ್ರತಿಫಲನಗೊಂಡಿದೆ.

ತಿಳಿ ಬಣ್ಣದ ಹೊರಾಂಗಣವು ಶಾಖ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಹೊಸ ಪರಿಸರ ಸ್ನೇಹಿ ತಂಪುಗೊಳಿಸುವ ತಂತ್ರಜ್ಞಾನಕ್ಕೆ ಪೂರಕವಾಗಿದೆ. ಟೆಂಟಿನ ಕ್ಯಾನೋಪಿಗಳು ಎಲ್ಲೆಡೆಯಿಂದ ಪಿಚ್‍ನತ್ತ ವಿಸ್ತರಣೆಗೊಂಡಿದ್ದು, ಮರಳುಗಾಡಿನ ಬಿಸಿಯ ಹೊಡೆತದಿಂದ ರಕ್ಷಣೆ ನೀಡುವ ಅಲೆಮಾರಿ ಜನಾಂಗದವರ ಟೆಂಟ್‍ಗಳಂತೆಯೇ ನೆರಳು ನೀಡುತ್ತದೆ. 

ಸ್ಟೇಡಿಯಂ ಸುತ್ತಲೂ 30 ಫುಟ್ಬಾಲ್ ಮೈದಾನದಷ್ಟು ವಿಸ್ತಾರವಾದ ಪಾರ್ಕ್ ಇದ್ದು, ಎಐ ಖೋರ್‍ಗೆ ಹಸಿರು ಹೊದಿಕೆಯನ್ನು ನೀಡುತ್ತದೆ. ಸ್ಟೇಡಿಯಂ ಮಾರ್ಗಗಳುದ್ದಕ್ಕೂ ಸಾಲು ಮರಗಳಿದ್ದು, ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಕಷ್ಟು ಟ್ಯಾಕ್ಸಿ ಹಾಗೂ ಬಸ್ ಸೌಲಭ್ಯ ಒದಗಿಸಲಾಗಿದೆ. 1600 ಟನ್ ತೂಕದ ಪಾರದರ್ಶಕ ಛಾವಣಿ ಸೂರ್ಯನ ಬೆಳಕನ್ನು ಸರಾಗವಾಗಿ ಒಳಕ್ಕೆ ಹರಿಯಲು ಅನುವು ಮಾಡಿಕೊಡುತ್ತದೆ ಹಾಗೂ ಇದು ಹುಲ್ಲುಹಾಸು ಬೆಳೆಯಲು ಅನುಕೂಲವಾಗುವ ಜತೆಗೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ.

265 ಮೀಟರ್/ 305 ಮೀಟರ್ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಟೆಂಟ್, ಪಿವಿಸಿ ಲೈನರ್ ಹೊಂಧದೆ. ಹೊರಭಾಗವನ್ನು ಪಿಟಿಎಫ್‍ಇ ಫ್ಯಾಬ್ರಿಕ್‍ನಿಂದ ನಿರ್ಮಿಸಲಾಗಿದೆ ಇದು ಶಾಖ ನಿರೋಧಕ ಫ್ಯಾಬ್ರಿಕ್ ಆಗಿದ್ದು, ವೋವೆನ್ ಫೈಬರ್ ಗ್ಲಾಸನ್ನು ಒಳಗೊಂಡಿದೆ. ಶೇಕಡ 20ರಷ್ಟು ನಿರ್ಮಾಣ ಸಾಮಗ್ರಿಗಳನ್ನು ಖತಾರ್ ನಲ್ಲೇ ಉತ್ಪಾದಿಸಲಾಗಿದ್ದು, ಪುನರ್ಬಳಕೆ ಮೂಲದಿಂದ ಬಂದಿವೆ.

ಕೃಪೆ: theweek.in

 

Similar News