ಫಿಫಾ ವಿಶ್ವಕಪ್‌ಗೆ ಝಾಕಿರ್‌ ನಾಯ್ಕ್‌ಗೆ ಆಹ್ವಾನ: ಪಂದ್ಯಾಕೂಟವನ್ನು ಬಹಿಷ್ಕರಿಸಲು ಬಿಜೆಪಿ ವಕ್ತಾರ ಕರೆ

Update: 2022-11-22 15:18 GMT

ಪಣಜಿ: ವಿವಾದಿತ ಇಸ್ಲಾಮಿಕ್ ವಿಧ್ವಾಂಸ ಝಾಕಿರ್ ನಾಯಕ್ ಅವರಿಗೆ ಖತರ್ ಫಿಫಾ ವಿಶ್ವಕಪ್‌ಗೆ ಆಹ್ವಾನ ನೀಡಿದ ನಂತರ, ಗೋವಾ ಬಿಜೆಪಿ ವಕ್ತಾರ ಸವಿಯೊ ರಾಡ್ರಿಗಸ್ ಸರ್ಕಾರ, ಭಾರತೀಯ ಫುಟ್‌ಬಾಲ್ ಸಂಸ್ಥೆಗಳು ಮತ್ತು ಖತರ್ ರಾಷ್ಟ್ರಕ್ಕೆ ಪ್ರಯಾಣಿಸುತ್ತಿರುವ ಭಾರತೀಯರು ಕ್ರೀಡಾಕೂಟವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.

ವಿಶ್ವವೇ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ನಾಯಕ್‌ಗೆ ವೇದಿಕೆ ನೀಡುವುದು ದ್ವೇಷವನ್ನು ಹರಡಲು ಭಯೋತ್ಪಾದಕ ಸಹಾನುಭೂತಿಯನ್ನು ನೀಡಿದಂತಿದೆ ಎಂದು ರಾಡ್ರಿಗಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಫಿಫಾ ವಿಶ್ವಕಪ್ ಒಂದು ಜಾಗತಿಕ ಘಟನೆಯಾಗಿದೆ. ಪ್ರಪಂಚದಾದ್ಯಂತದ ಜನರು ಈ ಅದ್ಭುತ ಕ್ರೀಡೆಯನ್ನು ವೀಕ್ಷಿಸಲು ಬರುತ್ತಾರೆ ಮತ್ತು ಲಕ್ಷಾಂತರ ಜನರು ಇದನ್ನು ಟಿವಿ ಮತ್ತು ಇಂಟರ್ನೆಟ್‌ನಲ್ಲಿ ವೀಕ್ಷಿಸುತ್ತಾರೆ. ಜಗತ್ತು ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಝಾಕಿರ್ ನಾಯಕ್‌ಗೆ ವೇದಿಕೆಯನ್ನು ನೀಡುವುದು, ಭಯೋತ್ಪಾದಕನಿಗೆ ತನ್ನ ಮೂಲಭೂತವಾದ ಮತ್ತು ದ್ವೇಷವನ್ನು ಹರಡಲು ವೇದಿಕೆಯನ್ನು ನೀಡುವುದಕ್ಕೆ ಸಮ," ಎಂದು ಅವರು ಹೇಳಿದ್ದಾರೆ.

"ಭಾರತದಲ್ಲಿ ಇಸ್ಲಾಮಿಕ್ ಮೂಲಭೂತವಾದ ಮತ್ತು ದ್ವೇಷ" ಹರಡುವಲ್ಲಿ ನಾಯಕ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿರುವ ರಾಡ್ರಿಗಸ್, "ಝಾಕಿರ್ ನಾಯಕ್ ಭಾರತೀಯ ಕಾನೂನಿನಡಿಯಲ್ಲಿ ಬೇಕಾಗಿರುವ ವ್ಯಕ್ತಿ. ಹಣ ವರ್ಗಾವಣೆ ಅಪರಾಧಗಳು ಮತ್ತು ದ್ವೇಷ ಭಾಷಣಗಳ ಆರೋಪ ಹೊತ್ತಿದ್ದಾರೆ. ಅವರು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಅವರು ಸ್ವತಃ ಭಯೋತ್ಪಾದಕನಿಗಿಂತ ಕಡಿಮೆಯಿಲ್ಲ. ಅವರು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ ಮತ್ತು ಭಾರತದಲ್ಲಿ ಇಸ್ಲಾಮಿಕ್ ಮೂಲಭೂತವಾದ ಮತ್ತು ದ್ವೇಷವನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ರಾಡ್ರಿಗಸ್ ಹೇಳಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಗೃಹ ಸಚಿವಾಲಯವು ಝಾಕಿರ್ ನಾಯ್ಕ್ ಸ್ಥಾಪಿಸಿದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್‌ಎಫ್) ಅನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸಿ ಐದು ವರ್ಷಗಳ ಕಾಲ ನಿಷೇಧಿಸಿತ್ತು.

Similar News