ಬಿಲ್ಲವ ಸಮುದಾಯವನ್ನು ಚುನಾವಣೆಗೆ ಬಳಸಿ, ಎಸೆದ ಸರಕಾರ: ಪ್ರಣವಾನಂದ ಸ್ವಾಮೀಜಿ ಆಕ್ರೋಶ
"ಜ.6ರಿಂದ ಮಂಗಳೂರಿಂದ ಬೆಂಗಳೂರಿಗೆ ಐತಿಹಾಸಿಕ ಪಾದಯಾತ್ರೆ"
ಉಡುಪಿ, ನ.22: ರಾಜ್ಯದಲ್ಲಿ ಸುಮಾರು 70 ಲಕ್ಷದಷ್ಟಿರುವ ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ನಮ್ಮ ಸಮಾಜದ ಮತದಾರರನ್ನು ಚುನಾವಣೆಯ ಸಮಯದಲ್ಲಿ ಬಳಸಿಕೊಂಡ ರಾಜ್ಯ ಸರಕಾರ ಈಗ ಅದನ್ನು ಸಂಪೂರ್ಣ ಕೈಬಿಟ್ಟಿದೆ ಎಂದು ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕು ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಶ್ರೀಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಕೆ ಮಾಡಿ, ಹಲ್ಲೆ, ಗಲಾಟೆ ವೇಳೆ ನಮ್ಮ ಯುವಕರನ್ನು ಬಳಸಿಕೊಂಡು ಅವರ ಹೆಣದ ಮೇಲೆ ನೀವು ರಾಜಕೀಯ ಮಾಡಿ ಬಳಿಕ ನಮ್ಮ ಸಮುದಾಯವನ್ನು ನಿರ್ಲಕ್ಷ್ಯ ಮಾಡುತಿದ್ದೀರಿ ಎಂದವರು ಆರೋಪಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂ. ಮೀಸಲಿಡಿ ಎಂದು ಬಹುಕಾಲದಿಂದ ಬೇಡಿಕೆ ಇಟ್ಟರೆ, ಸಮುದಾಯದ ಕಣ್ಣೊರೆಸುವ ತಂತ್ರವಾಗಿ ಕೇವಲ ನಾರಾಯಣಗುರು ಕೋಶವನ್ನು ಘೋಷಿಸಿ ನಮ್ಮ ಮುಂಗೈಗೆ ತುಪ್ಪ ಸವರುವ ಕೆಲಸ ಮಾಡುತ್ತೀರಿ. ರಾಜ್ಯದಲ್ಲಿ 16 ಬಲಾಢ್ಯ ಸಮುದಾಯಗಳಿಗೆ ನಿಗಮಗಳಿವೆ. ಕೇವಲ ಬಿಲ್ಲವ ಸಮುದಾಯಕ್ಕೆ ನಿಗಮ ನೀಡುವಲ್ಲಿ ಮೀನಮೇಷ ಎಣಿಸಲು ಕಾರಣವೇನು ಎಂದವರು ಪ್ರಶ್ನಿಸಿದರು.
ರಾಜ್ಯದಲ್ಲಿ ಈಗ ಸಮುದಾಯದ ಏಳು ಮಂದಿ ಚುನಾಯಿತ ಶಾಸಕರಿದ್ದಾರೆ. ಅದೇ ರೀತಿ ಇಬ್ಬರು ಪ್ರಭಾವಶಾಲಿ ಮಂತ್ರಿಗಳಿದ್ದಾರೆ. ಆದರೂ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕಿದ್ದ ಈ ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ನಮ್ಮ ಸಾಂವಿಧಾನಿಕ ಹಕ್ಕನ್ನು ಧಮನ ಮಾಡಿದಾಗ ಎಚ್ಚರಿಸುವ ಕೆಲಸವನ್ನು ಸಮುದಾಯ ಮಾಡಿದಾಗ ಸಹ ಇವರು ನಮ್ಮ ಪರವಾಗಿ ನಿಂತಿಲ್ಲ ಎಂದು ಸ್ವಾಮೀಜಿ ದೂರಿದರು.
ಬಹಿರಂಗ ಘೋಷಿಸಿ: ನಾರಾಯಣ ಗುರು ನಿಗಮದ ಸ್ಥಾಪನೆಯೂ ಸೇರಿದಂತೆ ನಮ್ಮ ಹತ್ತು ಬೇಡಿಕೆಗಳ ಪಟ್ಟಿಯನ್ನು ಸರಕಾರದ ಮುಂದಿರಿಸಿ ಹೋರಾಟ ನಡೆಸುತಿದ್ದರೂ, ಸರಕಾರ ಈ ಬಗ್ಗೆ ತೀರಾ ನಿರ್ಲಕ್ಷ್ಯದ ಧೋರಣೆ ಅನುಕರಿಸುತ್ತಿದೆ. ಹಾಗಿದ್ದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯದ ಮತಗಳ ಅಗತ್ಯವಿಲ್ಲ ಎಂದು ಬಹಿರಂಗವಾಗಿ ಘೋಷಿಸಿ. ಆಗ ನಾವು ನಮ್ಮ ಶಕ್ತಿ ಏನೆಂಬುದನ್ನು ನಿಮಗೆ ತೋರಿಸಿಕೊಡುತ್ತೇವೆ ಎಂದರು.
2023ರ ಚುನಾವಣೆಯಲ್ಲಿ ನಮಗೆ ಯಾವುದೇ ಪಕ್ಷ ಮುಖ್ಯವಲ್ಲ. ನಮ್ಮ ಸಮುದಾಯದ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ನಾವು ಆದ್ಯತೆ ನೀಡುತ್ತೇವೆ. ನಮ್ಮ ಸಮುದಾಯಕ್ಕೆ ಅನೇಕ ವರ್ಷಗಳಿಂದ ಅನ್ಯಾಯವಾಗುತ್ತಾ ಬಂದಿದೆ. ಅದಕ್ಕೆ ಉತ್ತರ ನೀಡುವ ಕಾಲ ಈಗ ಬಂದಿದೆ. ಶೇ.30ರಿಂದ 40ರಷ್ಟು ಸಮುದಾಯದ ಮತಗಳಿರುವ ಕ್ಷೇತ್ರಗಳಲ್ಲಿ ನಮ್ಮ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಬೇಕು. ಕರಾವಳಿಯಲ್ಲಿ ಕನಿಷ್ಠ ಮೂರು ಸ್ಥಾನವನ್ನು ನಮ್ಮವರಿಗೆ ನೀಡಬೇಕು ಎಂದರು.
ಬಿಲ್ಲವ ಯುವಕರಿಗೆ ಕರೆ: ಈವರೆಗೆ ಪಕ್ಷಗಳು ನಮ್ಮನ್ನು ‘ಯೂಸ್ ಎಂಡ್ ಥ್ರೋ’ ಮಾಡಿ ಕೈಬಿಟ್ಟಿವೆ. ನಮ್ಮ ಯುವಕರು ಧರ್ಮದ ರಾಜಕಾರಣ ಮಾಡುವ ಪಕ್ಷದ ಹುನ್ನಾರವನ್ನು ಅರ್ಥಮಾಡಿಕೊಳ್ಳಬೇಕು. ನಿಮಗೂ ಜೀವಿಸುವ ಹಕ್ಕಿದೆ. ನೀವೂ ಪಕ್ಷದಲ್ಲಿ ಒಬ್ಬ ನಾಯಕರಾಗಿ ಬೆಳೆಯಬೇಕು. ಕೇವಲ ಕಾರ್ಯಕರ್ತನಾಗುಳಿದರೆ ಎಲ್ಲರೂ ನಿಮ್ಮನ್ನು ಬಳಸಿಕೊಂಡು ಕೈಬಿಡುತ್ತಾರೆ. ಸಮುದಾಯದ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಉಳಿಸಲು ಎಲ್ಲಾ ಪಕ್ಷದ ಎಲ್ಲರಿಗೂ ಕರೆ ನೀಡುತಿದ್ದೇವೆ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ತೋನ್ಸೆಯ ಬಿ.ಪಿ. ರಮೇಶ್ ಪೂಜಾರಿ, ಸರ್ವೋತ್ತಮ ಪೂಜಾರಿ, ಸಂಜಯ್ ಪೂಜಾರಿ, ಆಕಾಶ್ ಕಾರ್ಕಳ ಉಪಸ್ಥಿತರಿದ್ದರು.
ಜ.1ರಂದು ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ
ಸಮುದಾಯದ ಹತ್ತು ಬೇಡಿಕೆಗಳನ್ನು ಮುಂದಿಟ್ಟುಕೊಂಡು 2023ರ ಜನವರಿ 6ರಂದು ಮಂಗಳೂರಿನಿಂದ ಬೆಂಗಳೂರಿಗೆ 658 ಕಿ.ಮೀ. ದೂರ ಐತಿಹಾಸಿಕ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳುವರು ಎಂದು ಪ್ರಣವಾನಂದ ಸ್ವಾಮೀಜಿ ನುಡಿದರು.
ಸರಕಾರದ ಮುಂದಿಟ್ಟ ಬೇಡಿಕೆಗಳಲ್ಲಿ ಪ್ರಮುಖವಾದವುಗಳೆಂದರೆ ಬ್ರಹ್ಮಶ್ರೀ ನಾರಾಯಣಗುರು ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ, ರಾಜ್ಯಾದ್ಯಂತ ಸಮುದಾಯದ ಕುಲಕಸಬು ಸೇಂದಿ ಇಳಿಸಿ ಮಾರಾಟ ಮಾಡಲು ಅನುಮತಿ, ಈಡಿಗ ಸಮುದಾಯ ನೇತೃತ್ವದಲ್ಲಿ ನಡೆಯುವ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಮೇಲೆ ಸರಕಾರದ ದೌರ್ಜನ್ಯ ನಿಲ್ಲಬೇಕು, ಮಂಗಳೂರು, ಉಡುಪಿ, ಶಿವಮೊಗ್ಗ, ಕಾರವಾರ ಜಿಲ್ಲೆಗಳಲ್ಲಿ ಸಮಾಜಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು, ರಾಜಧಾನಿ ಬೆಂಗಳೂರಿನಲ್ಲಿ ನಾರಾಯಣಗುರುಗಳ ಮೂರ್ತಿ ಸ್ಥಾಪನೆ ಮಾಡಬೇಕು.