ಜಮ್ಮು ಗಡಿಯಲ್ಲಿ ಒಳನುಸುಳುವ ಪ್ರಯತ್ನ ಬಿಎಸ್ಎಫ್ ನಿಂದ ವಿಫಲ: ಓರ್ವನ ಹತ್ಯೆ, ಇನ್ನೋರ್ವನ ಬಂಧನ
ಜಮ್ಮು, ನ. 22: ಜಮ್ಮು ಮುಂಚೂಣಿಯ ಅಂತರ ರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಮಂಗಳವಾರ ಮುಂಜಾನೆ ಎರಡು ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್) ಓರ್ವ ಒಳನುಸುಳುಕೋರನನ್ನು ಹತ್ಯೆಗೈದಿದೆ ಹಾಗೂ ಇನ್ನೋರ್ವನನ್ನು ಬಂಧಿಸಿದೆ.
‘‘ಮಂಗಳವಾರ ಮುಂಜಾನೆ 2.30ಕ್ಕೆ ಅರ್ನಿಯಾ (Arnia)ವಲಯದ ಅಂತರ ರಾಷ್ಟ್ರೀಯ ಗಡಿಯ ಸಮೀಪ ಒಳ ನುಸುಳುಕೋರನ ಅನುಮಾನಾಸ್ಪದ ಚಲನವಲನವನ್ನು ಬಿಎಸ್ಎಫ್(BSF) ಗಮನಿಸಿತು. ಅಂತರ ರಾಷ್ಟ್ರೀಯ ಗಡಿಯಲ್ಲಿ ಒಳನುಸುಳುಕೋರನೋರ್ವ ಭಾರತ ಭಾಗಕ್ಕೆ ದಾಟಿದ ಹಾಗೂ ಬೇಲಿಯತ್ತ ಧಾವಿಸಲು ಆರಂಭಿಸಿದ’’ ಎಂದು ಜಮ್ಮು ಮುಂಚೂಣಿಯ ಬಿಎಸ್ಎಫ್ ನ ಜನರಲ್ ಇನ್ಸ್ಪೆಕ್ಟರ್ ಡಿ.ಕೆ. ಬೂರಾ (D.K. Boora)ಅವರು ಬಿಎಸ್ಎಫ್ ನ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮುಂದೆ ಬರದಂತೆ ಒಳನುಸುಳುಕೋರನಿಗೆ ಬಿಎಸ್ಎಫ್ ಹಲವು ಬಾರಿ ಎಚ್ಚರಿಸಿತ್ತು. ಆದರೆ, ಅವರು ಯಾವುದೇ ಗಮನ ನೀಡಲಿಲ್ಲ. ಬದಲು ಆಕ್ರಮಣಕಾರಿಯಾಗಿ ಬೇಲಿಯತ್ತ ಆಗಮಿಸಿದ. ಈ ಹಿನ್ನೆಲೆಯಲ್ಲಿ ಬಿಎಸ್ಫ್ ಯೋಧರು ಗುಂಡು ಹಾರಿಸಿ ಓರ್ವ ಒಳನುಸುಳುಕೋರನನ್ನು ಹತ್ಯೆಗೈದರು ಹಾಗೂ ಒಳ ನುಸುಳುವ ಪ್ರಯತ್ನವನ್ನು ವಿಫಲಗೊಳಿಸಿದರು.
ಎರಡನೇ ಘಟನೆಯಲ್ಲಿ ಇಂದ್ರೇಶ್ವರ ನಗರದಲ್ಲಿ ಮುಂಜಾನೆ 4.30ರ ಹೊತ್ತಿಗೆ ಅಂತರ ರಾಷ್ಟ್ರೀಯ ಗಡಿಯಲ್ಲಿ ಸಂದೇಹಾಸ್ಪದ ಚಲನವಲನವನ್ನು ಬಿಎಸ್ಎಫ್ ಗಮನಿಸಿತು.
‘‘ಈ ಪ್ರಕರಣದಲ್ಲಿ ಒಳನುಸುಳುಕೋರ ಅಂತರ ರಾಷ್ಟ್ರೀಯ ಗಡಿಯ ಒಳಗೆ ನುಸುಳಲು ಪ್ರಯತ್ನಿಸಿದ. ಗಡಿ ಬೇಲಿಯ ಸಮೀಪ ಆಗಮಿಸಿದ. ತತ್ಕ್ಷಣ ಬಿಎಸ್ಎಫ್ ಯೋಧರು ದಾಳಿ ನಡೆಸಲು ಸಿದ್ಧರಾದರು. ಕೂಡಲೇ ಆತ ಶರಣಾಗತನಾಗಲು ಕೈಗಳನ್ನು ಮೇಲಕ್ಕೆತ್ತಿದ. ಆತನನ್ನು ಬಿಎಸ್ಎಫ್ ಯೋಧರು ಸೆರೆ ಹಿಡಿದರು’’ ಎಂದು ಅವರು ತಿಳಿಸಿದ್ದಾರೆ.
ಗಡಿಯಾಚೆಯಿಂದ ಮಾರ್ಗದರ್ಶಕರನ್ನು ಕಳುಹಿಸುವ ಮೂಲಕ ಭಾರತದ ಭೂಭಾಗಕ್ಕೆ ಭಯೋತ್ಪಾದಕರು ಪ್ರವೇಶಿಸಬಹುದೇ ಎಂಬುದನ್ನು ತಿಳಿಯಲು ಅವರು ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ, ನಾವು ಯಾವುದೇ ಒಳ ನುಸುಳುವಿಕೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಗಡಿ ಸುರಕ್ಷೆಗೆ ಬಿಎಸ್ಎಫ್ ಬದ್ಧವಾಗಿದೆ. ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗುವ ಶತ್ರುಗಳನ್ನು ನಾವು ಸೋಲಿಸಲಿದ್ದೇವೆ ಎಂದು ಬೂರಾ ಅವರು ಹೇಳಿದ್ದಾರೆ.