ದ್ವೇಷ ಭಾಷಣ ಪ್ರಕರಣ: ಎಸ್ಪಿ ನಾಯಕ ಅಝಂ ಖಾನ್ ಗೆ ಜಾಮೀನು

Update: 2022-11-22 17:16 GMT

ಬರೇಲಿ (ಉತ್ತರಪ್ರದೇಶ), ನ. 22:   2019ರ ದ್ವೇಷ ಭಾಷಣ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿ ಸತ್ರ ನ್ಯಾಯಾಲಯ ನೀಡಿದ್ದ  ತೀರ್ಪು ಪ್ರಶ್ನಿಸಿ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಝಂ ಖಾನ್ (Azam Khan)ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ವಿಶೇಷ ಸಂಸದ/ಶಾಸಕರ ನ್ಯಾಯಾಲಯ ಮಂಗಳವಾರ ಅವರಿಗೆ ಜಾಮೀನು ನೀಡಿದೆ. 

ದ್ವೇಷ ಭಾಷಣ ಪ್ರಕರಣದಲ್ಲಿ ಸತ್ರ ನ್ಯಾಯಾಲಯ ದೋಷಿ ಎಂದು ಪರಿಗಣಿಸಿದ್ದ ಹಾಗೂ ಶಿಕ್ಷೆ ನೀಡಿದ್ದ ಹಿನ್ನೆಲೆಯಲ್ಲಿ ಅಝಂ ಖಾನ್ ಅವರು ಉತ್ತರಪ್ರದೇಶ ವಿಧಾನ ಸಭೆಯಿಂದ ಅನರ್ಹಗೊಂಡಿದ್ದರು.

2019ರ ಲೋಕ ಸಭಾ ಚುನಾವಣೆ ಪ್ರಚಾರದ ಸಂದರ್ಭ ದ್ವೇಷ ಭಾಷಣ ಮಾಡಿರುವುದಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಲೋಕ್ ದುಬೆ (Alok Dubey) ಅಕ್ಟೋಬರ್ 27ರಂದು ಅಝಂ ಖಾನ್ಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ನೀಡಿದ್ದರು ಎಂದು ಅಝಂ ಖಾನ್ ಪರ ವಕೀಲ ಝುಬೈರ್ ಅಹ್ಮದ್ (Zubair Ahmed)ತಿಳಿಸಿದ್ದಾರೆ.

ಆಗ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಅನಂತರ ಅವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು ಎಂದು ಝುಬೈರ್ ಅಹ್ಮದ್ ತಿಳಿಸಿದ್ದಾರೆ. 

Similar News