ಬಿಜೆಪಿ ಸಂಸದನನ್ನು ತಲೆಮರಿಸಿಕೊಂಡಿರುವ ವ್ಯಕ್ತಿ ಎಂದು ಘೋಷಿಸಿದ ಉತ್ತರ ಪ್ರದೇಶ ನ್ಯಾಯಾಲಯ

Update: 2022-11-23 16:17 GMT

ಲಖ್ನೋ: 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸಂಸದರ/ಶಾಸಕರ ವಿಶೇಷ ನ್ಯಾಯಾಲಯವು ಷಹಜಹಾನ್‌ಪುರದ (Shahjahanpur) ಬಿಜೆಪಿ (BJP) ಸಂಸದ ಅರುಣ್ ಕುಮಾರ್ ಸಾಗರ್ (Arun Kumar Sagar) ಅವರು ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿದೆ.

ಅಲ್ಲದೆ, ಸಾಗರ್ ಅವರ ನಿವಾಸದಲ್ಲಿ ಹಾಗೂ ಶಹಜಹಾನ್‌ಪುರದ ಸಾರ್ವಜನಿಕ ಸ್ಥಳಗಳಲ್ಲಿ ಆದೇಶದ ಪ್ರತಿಯನ್ನು ಅಂಟಿಸುವಂತೆ ನ್ಯಾಯಾಲಯ ಆದೇಶಿಸಿದೆ. 

ಶಹಜಹಾನ್‌ಪುರ ಸದರ್ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಸಂಸತ್ ಚುನಾವಣೆಯ ಸಮಯದಲ್ಲಿ ಬರೇಲಿ-ಜಲಾಲಾಬಾದ್ ರಸ್ತೆಯಿಂದ   ಸಾಗರ್‌ಗೆ ಸಂಬಂಧಿಸಿದ ಪ್ರಚಾರ ಸಾಮಗ್ರಿಯನ್ನು ವಶಪಡಿಸಿಕೊಂಡಿದ್ದರು. ಈ ಕುರಿತು ಜಿಲ್ಲೆಯ ಕಾಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ಬಾರಿ ಸಮನ್ಸ್ ಜಾರಿ ಮಾಡಿದರೂ ಸಂಸದರು ಸಂಸದ/ಶಾಸಕ ನ್ಯಾಯಾಲಯಕ್ಕೆ ಹಾಜರಾಗಿಲ್ಲ, ನಂತರ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೀಲಿಮಾ ಸಕ್ಸೇನಾ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನವೆಂಬರ್ 21 ರಂದು ವಾರಂಟ್ ಹೊರಡಿಸಿದ ನಂತರವೂ ಅವರು ಹಾಜರಾಗದ ಕಾರಣ ನ್ಯಾಯಾಧೀಶರಾದ ಅಸ್ಮಾ ಸುಲ್ತಾನ್ ಅವರ ನ್ಯಾಯಪೀಠವು ಸಂಸದರನ್ನು ಪರಾರಿ ಎಂದು ಘೋಷಿಸಿದೆ.

 “ಇದು ರಾಜಕೀಯ ಪ್ರೇರಿತ ವಿಷಯವಾಗಿದೆ. ನನಗೆ ಅದರ ಬಗ್ಗೆ ಹೆಚ್ಚು ಗೊತ್ತಿಲ್ಲ. ನಾನು ನ್ಯಾಯಾಂಗದ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದೇನೆ ಮತ್ತು ಕಾನೂನಿನ ಪ್ರಕಾರ ಈ ವಿಷಯದಲ್ಲಿ ಕಾನೂನು ಪರಿಹಾರವನ್ನು ತೆಗೆದುಕೊಳ್ಳುತ್ತೇನೆ” ಎಂದು ಸಾಗರ್ TheHindu ಗೆ ತಿಳಿಸಿದ್ದಾರೆ.

Similar News