ಶೇ.10 ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ ತೀರ್ಪಿನ ವಿರುದ್ಧ ಕಾಂಗ್ರೆಸ್ ನಾಯಕಿಯಿಂದ ಪುನರ್ ಪರಿಶೀಲನೆ ಅರ್ಜಿ

Update: 2022-11-23 16:25 GMT

ಹೊಸದಿಲ್ಲಿ, ನ. 23: ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೇಲ್ಜಾತಿಯ ಆರ್ಥಿಕ ದುರ್ಬಲ ವರ್ಗದವರಿಗೆ ಶೇ. 10 ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌(Supreme Court)ನ ತೀರ್ಪಿನ ವಿರುದ್ಧ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ (Jaya Thakur)ಅವರು ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಗಳಿದ ವರ್ಗಗಳಿಗೆ ನೀಡುವ ಮೀಸಲಾತಿಯಲ್ಲಿ ಮೀಸಲಾತಿ ಪಡೆಯಲು ಸಾಧ್ಯವಾಗದ ಮೇಲ್ಜಾತಿಗೆ ಕೇಂದ್ರ ಸರಕಾರ 2019ರಲ್ಲಿ ಆರ್ಥಿಕ ದುರ್ಬಲ ವರ್ಗದ ಮೀಸಲಾತಿ ಪರಿಚಯಿಸಿತ್ತು.

ಆದರೆ, ಅವರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ಹೇಳಿತ್ತು. 5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಅಥವಾ 1,000 ಚದರ ಅಡಿ ವಸತಿ ಭೂಮಿ ಹೊಂದಿರುವ ಕುಟುಂಬದಿಂದ ಬಂದವರು ಈ ಮೀಸಲಾತಿಗೆ ಅರ್ಹರಲ್ಲ ಅದು ತಿಳಿಸಿತ್ತು. ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಸಾಂವಿಧಾನಿಕ ಪೀಠ ಮೇಲ್ಜಾತಿಯ ಆರ್ಥಿಕ ದುರ್ಬಲ ವರ್ಗದವರಿಗೆ ಶೇ. 10 ಮೀಸಲಾತಿ ನೀಡುವ ತೀರ್ಪನ್ನು 3-2ರ ಬಹುಮತದಲ್ಲಿ ನವೆಂಬರ್ 7ರಂದು ಎತ್ತಿ ಹಿಡಿದಿತ್ತು. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ(Dinesh Maheshwari,), ಬೇಲಾ ತ್ರಿವೇದಿ ( Bela Trivedi)ಹಾಗೂ ಜೆ.ಬಿ. ಪರ್ದಿಪವಾಲ (JB Pardipavala)ಅವರು ಮೀಸಲಾತಿಯನ್ನು ಎತ್ತಿ ಹಿಡಿದಿದ್ದರು.

ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್, ನ್ಯಾಯಮೂರ್ತಿ ರಬೀಂದ್ರ ಭಟ್ ಅವರು ಭಿನ್ನ ತೀರ್ಪು ನೀಡಿದ್ದರು. ದೇಶದಲ್ಲಿ ಮೇಲ್ಜಾತಿಯ ಜನಸಂಖ್ಯೆ ಕೇವಲ 6 ಇದ್ದರೂ ಆರ್ಥಿಕ ದುರ್ಬಲ ವರ್ಗದ ಮೀಸಲಾತಿ ಅಡಿಯಲ್ಲಿ ಮೇಲ್ಜಾತಿಯ ಬಡವರಿಗೆ ಮೀಸಲಾತಿ ನೀಡಲಾಗುತ್ತದೆ ಎಂದು ಠಾಕೂರ್ ಅವರು ತನ್ನ ಮನವಿಯಲ್ಲಿ ಪ್ರತಿಪಾದಿಸಿದ್ದಾರೆ. ಶೇ. 10 ಮೀಸಲಾತಿ ಅಸಮರ್ಪಕವಾಗಿದೆ ಎಂಬುದನ್ನು ಸಂಖ್ಯೆಗಳು ಸ್ಪಷ್ಟವಾಗಿ ತೋರಿಸುತ್ತದೆ. ಶೇ. 6 ಇರುವವರಿಗೆ ಶೇ. 10 ಮೀಸಲಾತಿ ನೀಡುವುದಕ್ಕೆ ಯಾವುದೇ ಆಧಾರ ಅಥವಾ ಸಮರ್ಥನೆ ನೀಡಲು ಸಾಧ್ಯವಿಲ್ಲ. ಆರ್ಥಿಕ ದುರ್ಬಲ ವರ್ಗದ ಅಡಿಯಲ್ಲಿ ನೀಡುವ ಶೇ. 10 ಮೀಸಲಾತಿ ಮೇಲ್ಜಾತಿಗೆ ಮಾತ್ರ ನೀಡಲಾಗುತ್ತದೆ. ಇದು ಸಮಾನತೆಯ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.

Similar News