ಫಿಫಾ ತೋಳುಪಟ್ಟಿ ನಿಷೇಧ ‘ಅತ್ಯಂತ ದುರದೃಷ್ಟಕರ’: ಜರ್ಮನಿ

Update: 2022-11-23 17:46 GMT

ಬರ್ಲಿನ್ (ಜರ್ಮನಿ), ನ. 23: ’ವನ್‌ಲವ್’ ('One Love')ಎಂಬ ಹೆಸರಿನ ತೋಳುಪಟ್ಟಿಯನ್ನು ಆಟಗಾರರು ಧರಿಸುವುದನ್ನು ನಿಷೇಧಿಸುವ ಫಿಫಾದ ನಿರ್ಧಾರವು ‘‘ಅತ್ಯಂತ ದುರದೃಷ್ಟಕರ’’ ("Extremely Unfortunate")ಎಂದು ಜರ್ಮನಿ ಸರಕಾರದ ವಕ್ತಾರರೊಬ್ಬರು ಬುಧವಾರ ಹೇಳಿದ್ದಾರೆ.

ಜಪಾನ್ ವಿರುದ್ಧದ ಜರ್ಮನಿಯ ಆರಂಭಿಕ ಪಂದ್ಯಕ್ಕೆ ಮುನ್ನ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಎಲ್‌ಜಿಬಿಟಿಕ್ಯೂ (ಸಲಿಂಗಿಗಳು, ಉಭಯ ಲಿಂಗಿಗಳು ಮತ್ತು ತೃತೀಯ ಲಿಂಗಿಗಳು) ಸಮುದಾಯದ ಹಕ್ಕುಗಳಲ್ಲಿ ಯಾವುದೇ ರಾಜಿಯಿಲ್ಲ’’ ಎಂದು ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಟೀಫನ್ ಹೆಬಸ್ಟ್ರೈಟ್ ಹೇಳಿದರು.

‘‘ಫಿಫಾ ವಿಶ್ವಕಪ್‌ನಲ್ಲಿ ನಿಲುವೊಂದನ್ನು ತೆಗೆದುಕೊಳ್ಳಲು ಅಥವಾ ಬೆಂಬಲದ ಗುರುತನ್ನು ತೋರಿಸಲು ಅಸಾಧ್ಯವಾಗಿರುವುದು ವಿಷಾದನೀಯವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

ತೋಳುಪಟ್ಟಿಯ ಸುತ್ತಲಿನ ವಿವಾದದ ಕುರಿತ ಚರ್ಚೆಯು ಫುಟ್ಬಾಲ್ ಅಸೋಸಿಯೇಶನ್‌ಗಳು ಮತ್ತು ಪ್ರಮುಖ ಕ್ರೀಡಾ ಕೂಟಗಳ ಸಂಘಟಕರ ಮನೋಭಾವದಲ್ಲಿ ‘ಧನಾತ್ಮಕ ಬದಲಾವಣೆ’ಯನ್ನು ತರುವುದು ಎಂದು ತಾನು ಆಶಿಸುವುದಾಗಿ ಹೆಬಸ್ಟ್ರೈಟ್ ಹೇಳಿದರು.

ಕಾಮನಬಿಲ್ಲಿನ ಚಿತ್ರವನ್ನು ಒಳಗೊಂಡಿರುವ ತೋಳುಪಟ್ಟಿಯನ್ನು ವಿಶ್ವಕಪ್ ಆತಿಥೇಯ ದೇಶ ಖತರ್‌ನಲ್ಲಿರುವ ಕಾನೂನುಗಳ ವಿರುದ್ಧದ ಸಾಂಕೇತಿಕ ಪ್ರತಿಭಟನೆಯಾಗಿದೆ ಎಂಬುದಾಗಿ ಭಾವಿಸಲಾಗಿದೆ. ಖತರ್‌ನಲ್ಲಿ ಸಲಿಂಗ ಸಂಬಂಧವು ಅಪರಾಧವಾಗಿದೆ.

Similar News