ಪೀಲೆ ನಂತರ ವಿಶ್ವಕಪ್ ನಲ್ಲಿ ಗೋಲು ಗಳಿಸಿದ ಕಿರಿಯ ವಯಸ್ಸಿನ ಆಟಗಾರ ಗಾವಿ

Update: 2022-11-24 12:54 GMT

ದೋಹಾ: ಬುಧವಾರ ನಡೆದ ಫಿಫಾ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಸ್ಪೇನ್ ತಂಡವು ಕೋಸ್ಟರಿಕ ವಿರುದ್ಧ ಗೋಲುಗಳ ಸುರಿಮಳೆಗರೆದು  7-0  ಅಂತರದಿಂದ ಜಯ ಸಾಧಿಸಿತು.  ಸ್ಪ್ಯಾನಿಷ್ ಮಿಡ್‌ಫೀಲ್ಡರ್ ಗಾವಿ ಬ್ರೆಝಿಲ್ ದಂತಕಥೆ ಪೀಲೆ ನಂತರ ವಿಶ್ವಕಪ್ ನಲ್ಲಿ ಗೋಲು ಗಳಿಸಿದ  ಅತ್ಯಂತ ಕಿರಿಯ ವಯಸ್ಸಿನ ಆಟಗಾರನಾಗಿ ಹೊರಹೊಮ್ಮಿದರು.

18 ರ ಹರೆಯದ ಗಾವಿ  ಅವರು  ಸೆಸ್ಕ್ ಫ್ಯಾಬ್ರೆಗಾಸ್ ನಿರ್ಮಿಸಿದ್ದ  ಸ್ಪ್ಯಾನಿಷ್ ದಾಖಲೆಯನ್ನೂ ಮುರಿದರು. ಫ್ಯಾಬ್ರೆಗಾಸ್ ಅವರು ತನ್ನ 19 ನೇ ವಯಸ್ಸಿನಲ್ಲಿ 2006 ರ ವಿಶ್ವಕಪ್ ಪಂದ್ಯದಲ್ಲಿ ಉಕ್ರೇನ್ ವಿರುದ್ಧ ಗೋಲು ದಾಖಲಿಸಿದ್ದರು.

ಕೋಸ್ಟರಿಕ ವಿರುದ್ಧ 7-0 ಅಂತರದ ಭರ್ಜರಿ  ಗೆಲುವಿನ ಹಾದಿಯಲ್ಲಿ  ಗಾವಿ 74ನೇ ನಿಮಿಷದಲ್ಲಿ ಸ್ಪೇನ್‌ ಪರ  ಐದನೇ ಗೋಲು ಗಳಿಸಿದರು.

ಮಿಡ್ ಫೀಲ್ಡರ್ ಗಾವಿ ನವೆಂಬರ್ 2021 ರಲ್ಲಿ ಸ್ಪೇನ್‌ಗಾಗಿ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು ಹಾಗೂ  ಅಂತರರಾಷ್ಟ್ರೀಯ ಗೋಲು ಗಳಿಸಿದ ಕಿರಿಯ ವಯಸ್ಸಿನ ಸ್ಪೇನ್ ಆಟಗಾರನೆಂಬ ಹೆಗ್ಗಳಿಕೆಗೂ  ಪಾತ್ರರಾಗಿದ್ದರು.

ಬ್ರೆಝಿಲ್ ದಂತಕಥೆ ಪೀಲೆ 1958 ರ ವಿಶ್ವಕಪ್ ಫೈನಲ್‌ನಲ್ಲಿ ಸ್ವೀಡನ್ ವಿರುದ್ಧ ಗೋಲು ಗಳಿಸಿದಾಗ  ಅವರಿಗೆ 17 ವರ್ಷ ಮತ್ತು 249 ದಿನಗಳಾಗಿದ್ದವು. ಪೀಲೆ ಈಗಲೂ   ಕಿರಿಯ ವಯಸ್ಸಿನ  ವಿಶ್ವಕಪ್  ಗೋಲ್ ಸ್ಕೋರರ್ ಆಗಿ ಉಳಿದಿದ್ದಾರೆ.

"ಸಹಜವಾಗಿ, ಈ ಪಟ್ಟಿಯಲ್ಲಿ ಬ್ರೆಝಿಲ್ ದಿಗ್ಗಜ ಪೀಲೆ ನಂತರ  ಎರಡನೇ ಸ್ಥಾನ ಪಡೆದಿರುವುದು ಗೌರವವಾಗಿದೆ. ಇದು ನನಗೆ ನಿಜವಾಗಿಯೂ ಸಂತೋಷ ತಂದಿದೆ" ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಗಾವಿ ಹೇಳಿದರು.

ಬುಧವಾರದ ಭರ್ಜರಿ  ಗೆಲುವು ದಾಖಲಿಸಿರುವ ಸ್ಪೇನ್ ತಂಡ  ಫಿಫಾ ವಿಶ್ವಕಪ್‌ನಲ್ಲಿ 100 ಗೋಲುಗಳ ಗಡಿ ದಾಟಿತು.

Similar News