ಒಟಿಟಿಯಲ್ಲಿ ಕಾಂತಾರ: ವಿವಾದಾತ್ಮಕ ʼವರಾಹ ರೂಪಂʼ ಹಾಡಿನ ಟ್ಯೂನ್‌ ಬದಲಾವಣೆ; ಸಿನಿಪ್ರೇಮಿಗಳ ಅಸಮಾಧಾನ

Update: 2022-11-24 16:46 GMT

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಜನಪ್ರಿಯ ಕಾಂತಾರ ಚಿತ್ರ ಅಮೇಝಾನ್‌ ಪ್ರೈಮ್‌ ನಲ್ಲಿ ನ. 24 ರಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿವಾದಕ್ಕೆ ಕಾರಣವಾಗಿದ್ದ ವರಾಹರೂಪಂ ಹಾಡಿನ ಟ್ಯೂನನ್ನು ಬದಲಿಸಿ ಒಟಿಟಿ ಪ್ಲಾಟ್‌ಫಾರ್ಮ್‌ ಅಲ್ಲಿ ಬಿಡುಗಡೆಗೊಳಿಸಲಾಗಿದೆ.

‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡಿನ ಟ್ಯೂನ್‌ ಅನ್ನು ಚೌರ್ಯ ಮಾಡಲಾಗಿದೆ, ಹಾಡಿನ ಮೂಲ ಟ್ಯೂನ್‌ ನಮ್ಮದು ಎಂದು ಕೇರಳ ಮೂಲದ thaikkudam bridge ಎಂಬ ಮ್ಯೂಸಿಕ್‌ ಬ್ಯಾಂಡ್‌ ಕೇರಳದ ಕೋರ್ಟಿನಲ್ಲಿ ದಾವೆ ಹೂಡಿತ್ತು. ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ಈ ಹಾಡನ್ನು ಪ್ರಸಾರ ಮಾಡದಂತೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ‘ಹೊಂಬಾಳೆ ಫಿಲ್ಮ್ಸ್​’ ಕೇರಳ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿತ್ತು. ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ಚಿತ್ರತಂಡದ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗಿದ್ದು, ಈ ಕಾರಣದಿಂದ ಒಟಿಟಿ ಪ್ಲಾಟ್‌ಫಾರ್ಮ್‌ ನಲ್ಲಿ ಬಿಡುಗಡೆಗೊಳಿಸುವಾಗ ಹಾಡಿನ ಟ್ಯೂನ್ ಬದಲಿಸಲಾಗಿದೆ.

ವಿವಾದಕ್ಕೊಳಗಾಗಿರುವ ಮೊದಲ ಟ್ಯೂನ್‌ ಅನ್ನು ಮೆಚ್ಚಿಕೊಂಡಿರುವ ಹಲವು ಸಿನಿ ಪ್ರೇಮಿಗಳು ನೂತನ ಆವೃತ್ತಿಯ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ಹೊರಹಾಕಿರುವ ನೆಟ್ಟಿಗರು ಮೊದಲು ಇದ್ದ ವರಾಹರೂಪಂ ಹಾಡು ಇಲ್ಲದೆ ಸಿನೆಮಾ ಸಪ್ಪೆ ಅನಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮೂಲ ವರಾಹರೂಪಂ ಇಲ್ಲದೆ ಬಿಡುಗಡೆಯಾದ ಕಾಂತಾರದಲ್ಲಿ ಅದರ ʼಆತ್ಮʼ ಇಲ್ಲದಂತಾಗಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ವರಾಹರೂಪಂ (ಹಳೆ ಆವೃತ್ತಿ)ಯನ್ನು ಕಳೆದುಕೊಂಡಿರುವುದು ಕಾಂತಾರ ಚಿತ್ರಕ್ಕೆ ತುಂಬಲಾರದ ನಷ್ಟ ಎಂದು ಮತ್ತೊಬ್ಬ ಟ್ವಿಟರ್‌ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ರಾಜಶೇಖರ್‌ ಎಂಬವರು ಪ್ರತಿಕ್ರಿಯಿಸಿ, "ಆ ಹಾಡಿನಲ್ಲಿ (ಹಳೆಯ ವರಾಹರೂಪಂ ದೈವಿಕ ಭಾವವಿತ್ತು. ತಪ್ಪಿತಸ್ಥರು ಯಾರೇ ಇರಲಿ, ಮೂಲ ಅನುಭವ ಈಗ ಕಳೆದುಕೊಂಡಿದ್ದೇವೆ" ಎಂದು ಬರೆದಿದ್ದಾರೆ. ಸಿದ್ದಾರ್ಥ ಎಂಬವರು ಪ್ರತಿಕ್ರಿಯಿಸಿ, "ವರಾಹರೂಪಂ ನ ಹೊಸ ಆವೃತ್ತಿಯನ್ನು ಥಿಯೇಟರುಗಳಲ್ಲಿ ಪ್ರದರ್ಶಿಸಿದ್ದರೆ, ಅದರ ಪರಿಣಾಮ ಹೀಗೆಯೇ ಇರುತ್ತಿತ್ತೇ?" ಎಂದು ಪ್ರಶ್ನಿಸಿದ್ದಾರೆ. 

Full View

Similar News