ಹಣ ಅಕ್ರಮ ವರ್ಗಾವಣೆ ಆರೋಪ : ಆಪ್ ನಾಯಕನ ಮನವಿ ತಿರಸ್ಕೃತ

Update: 2022-11-24 17:18 GMT

ಹೊಸದಿಲ್ಲಿ, ನ. 24: 2020ರ ದಿಲ್ಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ವಿರುದ್ಧ ರೂಪಿಸಲಾದ ಹಣ ಅಕ್ರಮ ವರ್ಗಾವಣೆ ಆರೋಪವನ್ನು ಪ್ರಶ್ನಿಸಿ ಆಮ್ ಆದ್ಮಿ(Aam Aadmi) ಪಕ್ಷದ ಜೈಲಿನಲ್ಲಿರುವ ನಾಯಕ ತಾಹಿರ್ ಹುಸೈನ್(Tahir Hussain) ಸಲ್ಲಿಸಿದ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ಅನು ಮಲ್ಹೋತ್ರ(Anu Malhotra) ಪ್ರಕರಣದ ಕುರಿತ ಆದೇಶವನ್ನು ನವೆಂಬರ್ 15ಕ್ಕೆ ಕಾಯ್ದಿರಿಸಿದ್ದಾರೆ. ಮೇಲ್ನೋಟದ ತನಿಖೆಯ ಆಧಾರದಲ್ಲಿ ಹುಸೈನ್ ಹಣ ಅಕ್ರಮ ವರ್ಗಾವಣೆಯ ಪಿತೂರಿಯಲ್ಲಿ ತೊಡಗಿದ್ದಾರೆ ಹಾಗೂ ಇದರಿಂದ ಬಂದ ಹಣವನ್ನು ಗಲಭೆಗೆ ಬಳಸಿದ್ದಾರೆ ಎನ್ನಬಹುದು ಎಂದು ದಿಲ್ಲಿ ಉಚ್ಚ ನ್ಯಾಯಾಲಯ ನವೆಂಬರ್ 3ರಂದು ಹೇಳಿತ್ತು.

ದಿಲ್ಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹುಸೈನ್ ಹಾಗೂ ಇತರ ಏಳು ಮಂದಿಯ ವಿರುದ್ಧ ಹತ್ಯೆ ಯತ್ನ, ಕ್ರಿಮಿನಲ್ ಸಂಚು ಹಾಗೂ ಕಾನೂನು ಬಾಹಿರ ಸಭೆ ಸೇರಿದ ಆರೋಪವನ್ನು ನವೆಂಬರ್ 5ರಂದು ಹೊರಿಸಲಾಗಿತ್ತು. ದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಹುಸೈನ್ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದ್ದಾನೆ. ದಿಲ್ಲಿಯಲ್ಲಿ 2020ರಲ್ಲಿ ನಡೆದ ಹಿಂಸಾಚಾರದಲ್ಲಿ 53 ಮಂದಿ ಸಾವನ್ನಪ್ಪಿದ್ದರು ಹಾಗೂ ನೂರಾರು ಮಂದಿ ಗಾಯಗೊಂಡಿದ್ದರು.

Similar News