ಅಳಿಯನಿಂದಲೇ ರೂ. 100 ಕೋಟಿಗೂ ಹೆಚ್ಚು ವಂಚನೆ: ಕೇರಳ ಮೂಲದ ದುಬೈ ಉದ್ಯಮಿಯಿಂದ ಪೊಲೀಸ್ ದೂರು

Update: 2022-11-25 11:47 GMT

ಕೊಚ್ಚಿ:  ದುಬೈ (Dubai) ಮೂಲದ ಎನ್ನಾರೈ ಉದ್ಯಮಿ (NRI Businessman) ಅಬ್ದುಲ್ ಲಹೀರ್ ಹುಸೈನ್ ಅವರು ಖುದ್ದು ತಮ್ಮ ಅಳಿಯನಿಂದಲೇ ವಂಚನೆಗೊಳಗಾಗಿದ್ದಾರೆ. ಈ ಕುರಿತು ಅವರು ಮೂರು ತಿಂಗಳ ಹಿಂದೆ ಕೇರಳದ ಅಲುವಾ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಅಳಿಯ ತನಗೆ ಸುಮಾರು ರೂ. 107 ಕೋಟಿ ವಂಚಿಸಿದ್ದಾರೆ, ಜೊತೆಗೆ ತಾನು ಪುತ್ರಿಗೆ ಉಡುಗೊರೆಯಾಗಿ ನೀಡಿದ್ದ 1,000 ಸಾವರಿನ್ ಚಿನ್ನಾಭರಣಗಳ ಕುರಿತಂತೆಯೂ ವಂಚಿಸಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹಸನ್ ಅವರ ಪುತ್ರಿ 2017 ರಲ್ಲಿ ಕಾಸರಗೋಡಿನ (Kasaragod) ಮುಹಮ್ಮದ್ ಹಾಫಿಝ್ ಎಂಬಾತನನ್ನು ವಿವಾಹವಾಗಿದ್ದರು.

ಈ ಪ್ರಕರಣದಲ್ಲಿ ವಂಚನೆಗೊಳಗಾದ ಮೊತ್ತ ರೂ. 100 ಕೋಟಿಗೂ ಅಧಿಕವಾಗಿರುವುದರಿಂದ ಹಾಗೂ ಆರೋಪಿ ಇನ್ನೂ ತಲೆಮರೆಸಿಕೊಂಡಿರುವುದರಿಂದ ಪ್ರಕರಣದ ತನಿಖೆಯನ್ನು ಕೇರಳ ಪೊಲೀಸರ ಕ್ರೈಂ ಬ್ರ್ಯಾಂಚಿಗೆ ನವೆಂಬರ್ 24 ರಂದು ಹಸ್ತಾಂತರಿಸಲಾಗಿದೆ. ಆರೋಪಿ ಗೋವಾದಲ್ಲಿದ್ದಾನೆಂದು ಹೇಳಲಾಗುತ್ತಿದೆ.

ಆರಂಭದಲ್ಲಿ ಅಳಿಯ ತನ್ನ ಮೇಲಾದ ಇಡಿ ದಾಳಿಯ ನಂತರ ಪಾವತಿಸಬೇಕಾದ ದಂಡಕ್ಕಾಗಿ ರೂ. 4 ಕೋಟಿಗೆ ಬೇಡಿಕೆಯಿಟ್ಟಿದ್ದ, ನಂತರ ಜಮೀನು ಖರೀದಿ, ಪಾದರಕ್ಷೆ ಮಳಿಗೆ ಆರಂಭಕ್ಕೆ, ಹೀಗೆ ಹಲವಾರು ಕಾರಣಗಳನ್ನು ಮುಂದೊಡ್ಡಿ ರೂ. 92 ಕೋಟಿಗೂ ಅಧಿಕ ಹಣ ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ಜೊತೆಗೆ ಅಕ್ಷಯ್ ಥಾಮಸ್ ವೈದ್ಯನ್ ಎಂಬಾತನೂ ಜೊತೆಗೂಡಿದ್ದ, ಇಬ್ಬರ ಹೆಸರುಗಳನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 2002ರಲ್ಲಿ ಅವರಿಗೆ ಪಾಠ ಕಲಿಸಿ, ರಾಜ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲಾಯಿತು: ಗುಜರಾತ್‌ ನಲ್ಲಿ ಅಮಿತ್ ಶಾ 

Similar News