×
Ad

ನ.26ರಿಂದ ಡಿ.10: ರಾಜ್ಯ ಮಟ್ಟದ ಖಾದಿ ಉತ್ಸವ

Update: 2022-11-25 17:18 IST

ಮಂಗಳೂರು, ನ.25: ಜಿಲ್ಲಾಡಳಿತದ ಸಹಕಾರದಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಖಾದಿ ಉತ್ಸವ 2022 ನ. 26ರಿಂದ ಡಿಸೆಂಬರ್ 10ರವರೆಗೆ ಆಯೋಜಿಸಲಾಗಿದೆ.

ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನ. 26ರಂದು ಬೆಳಗ್ಗೆ 10 ಗಂಟೆಗೆ ಖಾದಿ ಉತ್ಸವದ ಉದ್ಘಾಟನೆ ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ನೆರವೇರಿಸಲಿದ್ದಾರೆ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಕೆ.ವಿ. ನಾಗರಾಜು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಖಾದಿ ವಸ್ತುಪ್ರದರ್ಶನ ಮಳಿಗೆಯನ್ನು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್ ನಾಗರಾಜು ಉದ್ಘಾಟಿಸುವರು. ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಖಾದಿ ನಡೆದ ಬಂದ ದಾರಿ ಚಿತ್ರ ಪ್ರಾತ್ಯಕ್ಷಿಕೆಯನ್ನು ಅಂಗಾರ ಎಸ್. ಉದ್ಘಾಟಿಸುವರು ಎಂದು ಅವರು ಹೇಳಿದರು.

ಉತ್ಸವದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ 75 ಮಳಿಗೆಗಳು ಇರಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಪರಂಪರಾಗತ ಶೈಲಿಯ, ಪರಿಸರ ಸಹ್ಯ, ಸರಳ ಖಾದಿ ಉಡುಪುಗಳೊಂದಿಗ ಆಧುನಿಕತೆಯ ಮೆರಗನ್ನು ಹೊಂದಿದ ಅರಳೆ ಖಾದಿ, ಪಾಲಿವಸ್ತ್ರ ಖಾದಿ, ಉಣ್ಣೆಖಾದಿ ಹಾಗೂ ರೇಷ್ಮೆ ಖಾದಿ ಉಡುಪುಗಳು ಮತ್ತು ಉತ್ತರ ಭಾರತದ ಖಾದಿ ರೇಷ್ಮೆ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ವಿ. ನಾಗರಾಜ ತಿಳಿಸಿದರು.

ರಾಜ್ಯದಲ್ಲಿ 164 ಖಾದಿ ಸಂಘ ಸಂಸ್ಥೆಗಳ ಮೂಲಕ 255 ಅಧಿಕೃತ ಖಾದಿ ಭಂಡಾರಗಳು ಕಾರ್ಯ ನಿರ್ವಹಿಸುತ್ತಿವೆ. 2021-22ನೆ ಸಾಲಿನಲ್ಲಿ ಸುಮಾರು 285.19 ಕೋಟಿ ರೂ. ಖಾದಿ ಉತ್ಪಾದನೆಯಾಗಿದ್ದು, ಸುಮಾಉರ 16000 ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಖಾದಿ ಸಂಘ ಸಂಸ್ಥೆಗಳ ಖಾದಿ ಉತ್ಪಾದನೆ ಮೇಲೆ ಕರ್ನಾಟಕ ಸರಕಾರದಿಂದ ಶೇ. 15ರಷ್ಟು ಎಂಡಿಎ ಮತ್ತು ಕೇಂದ್ರ ಸರಕಾರದಿಂದ ಶೇ. 30ರಷ್ಟು ಎಂಎಂಡಿಎ ನೀಡಲಾಗುತ್ತದೆ. ಖಾದಿ ಸಂಘ ಸಂಸ್ಥೆಗಳಲ್ಲಿ ದುಡಿಯುವ ಕಸುಬುದಾರರಿಗೆ ರಾಜ್ಯ ಸರಕಾರದಿಂದ ಪ್ರೋತ್ಸಾಹ ಮಜೂರಿಯನ್ನು ನೀಡಲಾಗುತ್ತದೆ. 2021-22ನೆ ಸಾಲಿನಲ್ಲಿ 15 ಕೋಟಿ ರೂ. ಎಂಡಿಎ ಹಾಗೂ 15 ಕೋಟಿ ರೂ. ಪ್ರೋತ್ಸಾಹ ಮಜೂರಿ ಅನುದಾನ ಖಾದಿ ಸಂಘ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಅವರು ವಿವರಿಸಿದರು.

2008-09ನೆ ಸಾಲಿನಿಂದ ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಜಾರಿಯಾಗಿದ್ದು, ಈ ಯೋಜನೆಯಡಿ ಕರ್ನಾಟಕಾದ್ಯಂತ ಒಟ್ಟು 10098 ಘಟಕಗಳಿಗೆ 259.20 ಕೋಟಿ ರೂ. ಮೊತ್ತದ ಸಹಾಯಧನ ನೀಡಿ 80784 ಜನರಿಗೆ ಮಂಡಳಿಯ ವತಿಯಿಂದ ಉದ್ಯೋಗಾವಕಾಶ ಕಲ್ಪಿಸಲಾಗಿದೆ. 2015-16ನೆ ಸಾಲಿನಲ್ಲಿ ರಾಜ್ಯ ಸರಕಾರದ ವತಿಯಿಂದ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಸಿಎಂಇಜಿಪಿ) ಜಾರಿಯಾಗಿದ್ದು, ಈವರೆಗೆ ಒಟ್ಟು 1635 ಘಟಕಗಳಿಗೆ 28 ಕೋಟಿ ರೂ. ಮೊತ್ತ ಸಹಾಯಧನ ನೀಡಿ 2354 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.

ಗೋಷ್ಠಿಯಲ್ಲಿ ಮಂಡಳಿಯ ದ.ಕ. ಜಿಲ್ಲಾ ನಿರ್ದೇಶಕರ ಮಾಧವ ಶೆಟ್ಟಿಗಾರ್, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ನಾಗಜ್ಯೋತಿ ವಿ. ನಾಯ್ಕ್, ರಾಘವೇಂದ್ರ ಅಡಿಗ, ವಿ. ಅಣ್ಣಪ್ಪ, ಮಲ್ಲಿಕಾರ್ಜುನ, ವಿದ್ಯಾ, ಇ. ರಾಜಣ್ಣ, ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.

ಪಿಎಂಇಜಿಪಿ ಗುರಿ ಸಾಧನೆಯಲ್ಲಿ ದ.ಕ. ಪ್ರಥಮ

ದ.ಕ. ಜಿಲ್ಲೆಯಲ್ಲಿ 2021-22ನೆ ಸಾಲಿನಲ್ಲಿ ಪಿಎಎಂಇಜಿಪಿಯಡಿ 195 ಘಟಕಗಳಿಗೆ ಹಾಗೂ 22-23ನೆ ಸಾಲಿನಲ್ಲಿ ಈವರೆಗೆ 91 ಘಟಕಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಗುರಿ ಸಾಧನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಕೆ.ವಿ. ನಾಗರಾಜು  ತಿಳಿಸಿದರು. 

Similar News