ಬಾಕಿ ಪಾವತಿಸುವಂತೆ ಹೇಳಿದ ದಲಿತ ವ್ಯಕ್ತಿಗೆ ಥಳಿಸಿ, ಮೂತ್ರ ಕುಡಿಸಿ, ಚಪ್ಪಲಿ ಹಾರ ಹಾಕಿದ ಆರೋಪಿಗಳು

Update: 2022-11-25 12:35 GMT

ಹೊಸದಿಲ್ಲಿ: ರಾಜಸ್ಥಾನದ (Rajasthan) ಸಿರೋಹಿ ಜಿಲ್ಲೆಯ ದಲಿತ (Dalit) ಇಲೆಕ್ಟ್ರಿಶಿಯನ್ ಒಬ್ಬ ತಾನು ಮಾಡಿದ ಕೆಲಸದ ಬಿಲ್ ಮೊತ್ತ ಪಾವತಿಸುವಂತೆ ಆಗ್ರಹಿಸಿದ್ದನ್ನು ವಿರೋಧಿಸಿ ಕೆಲವರು ಆತನಿಗೆ ಥಳಿಸಿ, ಮೂತ್ರ ಕುಡಿಸಿ, ಚಪ್ಪಲಿ ಹಾರ ಹಾಕಿ ಅವಮಾನಿಸಿದ ಘಟನೆ ನಡೆದಿದೆ ಎಂದು indiatoday.in ವರದಿ ಮಾಡಿದೆ.

ತನ್ನನ್ನು ಹಿಂಸಿಸದಂತೆ ಸಂತ್ರಸ್ತ ಪರಿಪರಿಯಾಗಿ ಬೇಡುತ್ತಿದ್ದರೂ ಬಿಡದೆ ಆತನ ಮೇಲೆ ದೌರ್ಜನ್ಯವೆಸಗಿದ ಈ ಘಟನೆಯ ವೀಡಿಯೋವನ್ನೂ ಆರೋಪಿಗಳಲ್ಲೊಬ್ಬಾತ ಸೆರೆಹಿಡಿದಿದ್ದಾನೆ. ಈ ವೀಡಿಯೋವನ್ನು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿತ್ತು.

ಸಂತ್ರಸ್ತ ಭರತ್ ಕುಮಾರ್ (38) ಎಂಬಾತ ಈ ಘಟನೆ ಕುರಿತು ಮೂವರ ವಿರುದ್ಧ ನವೆಂಬರ್ 23 ರಂದು ದೂರು ನೀಡಿದ್ದಾನೆ. ಆತ ನಡೆಸಿದ ಕೆಲ ಇಲೆಕ್ಟ್ರಿಕಲ್ ಕಾಮಗಾರಿಗಳ ಬಿಲ್ ರೂ 21,100 ಆಗಿತ್ತಾದರೂ ಆತನಿಗೆ ಕೇವಲ ರೂ 5000 ಪಾವತಿಸಲಾಗಿತ್ತು. ನವೆಂಬರ್ 19 ರಂದು ಆತ ಉಳಿದ ಹಣಕ್ಕೆ ಬೇಡಿಕೆಯಿಡಲು  ಹೋಗಿದ್ದ ಆದರೆ ರಾತ್ರಿ ಬರಲು ಹೇಳಲಾಯಿತಾದರೂ ಹಣ ನೀಡಲಾಗಿರಲಿಲ್ಲ. ಆಗ ಆತ ಪೊಲೀಸ್ ದೂರು ನೀಡುವ ಬೆದರಿಕೆಯೊಡ್ಡಿದ್ದ. ಇದರಿಂದ ಸಿಟ್ಟುಗೊಂಡ ಆರೋಪಿಗಳು ಆತನಿಗೆ ಥಳಿಸಿ, ಮೂತ್ರ ಕುಡಿಸಿ, ಚಪ್ಪಲಿ ಹಾರ ಹಾಕಿದ್ದರು. ಸುಮಾರು 5 ಗಂಟೆಗಳ ಕಾಲ ಅವರು ಆತನನ್ನು ಹಿಂಸಿಸಿದ್ದರು ಎಂದು ದೂರಲಾಗಿದೆ.

Similar News