ಶ್ರದ್ಧಾ ವಾಲ್ಕರ್ ಪ್ರಕರಣ: ಆರೋಪಿಯನ್ನು ಬೆಂಬಲಿಸಿ, ಮುಸ್ಲಿಮನೆಂದು ಬಿಂಬಿಸಿಕೊಂಡಿದ್ದ ವಿಕಾಸ್‌ ಕುಮಾರ್‌ ಬಂಧನ

Update: 2022-11-25 12:42 GMT

ಲಕ್ನೋ: ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಲ್ಕರ್ ಳನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ದೇಹವನ್ನು ಕೊಚ್ಚಿ ಹಾಕಿ ಹಲವೆಡೆ ಎಸೆದ ಪ್ರಕರಣದಲ್ಲಿ ಜೈಲುಪಾಲಾಗಿರುವ ಅಫ್ತಾಬ್ ಅಮೀನ್ ಪೂಲಾವಾಲನನ್ನು ಬೆಂಬಲಿಸಲು ತಾನೊಬ್ಬ ಮುಸ್ಲಿಂ ವ್ಯಕ್ತಿ ಎಂದು  ತನ್ನನ್ನು ಪರಿಚಯಿಸಿಕೊಂಡ ಬುಲಂದ್‍ಶಹರ್ ಜಿಲ್ಲೆಯ ಸಿಕಂದರಾಬಾದ್‍ನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವಿಕಾಸ್ ಕುಮಾರ್ ಎಂಬ ಅಸಲಿ ಹೆಸರು ಹೊಂದಿರುವ ಈ ವ್ಯಕ್ತಿ  ದಿಲ್ಲಿಯಲ್ಲಿ ಈ ಹತ್ಯೆ ಪ್ರಕರಣದ ಕುರಿತು ಪತ್ರಕರ್ತರೊಬ್ಬರೊಡನೆ ಮಾತನಾಡುವ ವೇಳೆ ತನ್ನನ್ನು ರಶೀದ್ ಖಾನ್ ಎಂದು ಪರಿಚಯಿಸಿಕೊಂಡಿದ್ದನಲ್ಲದೆ ಇಂತಹ ಕೃತ್ಯಗಳು ಕೋಪೋದ್ರಿಕ್ತ ಸನ್ನಿವೇಶಗಳಲ್ಲಿ ನಡೆಯುತ್ತವೆ, ಅಷ್ಟೇ ಅಲ್ಲದೆ ಒಂದು ದೇಹವನ್ನು 35 ತುಂಡುಗಳಷ್ಟೇ ಅಲ್ಲ 36 ತುಂಡುಗಳನ್ನಾಗಿ ಮಾಡಬಹುದು, ಇದು ದೊಡ್ಡ ವಿಚಾರವೇನಲ್ಲ ಎಂದು ಹೇಳಿಕೊಂಡಿದ್ದ.

ವಿಕಾಸ್ ಓರ್ವ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಆತನ ವಿರುದ್ಧ ಕಳ್ಳತನ, ಅಕ್ರಮ ಶಸ್ತ್ರ ಹೊಂದಿದ ಆರೋಪದ ಮೇಲೆ ಬುಲಂದ್‍ಶಹರ್, ನೊಯ್ಡಾದಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾನು ಆಡಿದ ಮಾತು ಇಷ್ಟೊಂದು ದೊಡ್ಡ ವಿಚಾರವಾಗುವುದು ಎಂದು ತಿಳಿದಿರಲಿಲ್ಲ ಎಂದು ಬಂಧನದ ನಂತರ ಆತ ಹೇಳಿದ್ದಾನೆ. ಹೇಳಿದ್ದಕ್ಕೆ ವಿಷಾದವಿದೆಯೇ ಎಂದು ಕೇಳಿದಾಗ "ಇಲ್ಲಿ ಅಥವಾ ಜೈಲಿನಲ್ಲಿ ನನ್ನನ್ನು ಸಾಯಿಸಬಹುದೆಂಬ ಭಯವಿದೆ" ಎಂದು ಆತ ಹೇಳಿಕೊಂಡಿದ್ದಾನೆ.

Similar News