ನೋಟು ನಿಷೇಧವು ಉದ್ದೇಶ ಈಡೇರಿಸಿಲ್ಲ ಎಂಬುದು ತಪ್ಪು ಅಭಿಪ್ರಾಯ: ಸುಪ್ರೀಂ ಕೋರ್ಟಿಗೆ ಅಟಾರ್ನಿ ಜನರಲ್ ಹೇಳಿಕೆ

Update: 2022-11-26 11:52 GMT

ಹೊಸದಿಲ್ಲಿ: ಕೇಂದ್ರ ಸರ್ಕಾರ 2016 ರಲ್ಲಿ ಜಾರಿಗೊಳಿಸಿದ ನೋಟು ಅಮಾನ್ಯೀಕರಣವು ತನ್ನ ಉದ್ದೇಶವನ್ನು ಈಡೇರಿಸಲು ವಿಫಲವಾಗಿದೆ ಮತ್ತು ಅನಗತ್ಯ ಸಮಸ್ಯೆ ಸೃಷ್ಟಿಸಿದೆ ಎಂಬ ಅಭಿಪ್ರಾಯ ತಪ್ಪು ಎಂದು ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠದ ಮುಂದೆ ಇಂದು ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಾದಿಸಿದರು.

ಅಮಾನ್ಯೀಕರಣ ನೀತಿಯನ್ನು ವಿರೋದಿಸಿ ಸಲ್ಲಿಸಲಾದ ಸುಮಾರು 50 ಕ್ಕೂ ಅಧಿಕ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿ ವಿ ನಾಗರತ್ನ ಅವರ ಪೀಠ ವಿಚಾರಣೆ ನಡೆಸುತ್ತಿದೆ.

"ವಿಶಾಲ ದೃಷ್ಟಿಕೋನದಿಂದ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳನ್ನು ಗಮನಿಸಿದಾಗ ಅಮಾನ್ಯೀಕರಣ ವಿಫಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ಅಟಾರ್ನಿ ಜನರಲ್ ಹೇಳಿದರಲ್ಲದೆ "ಅಮಾನ್ಯೀಕರಣದಿಂದ ನಕಲಿ ನೋಟುಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಲು ಸಾಧ್ಯವಾಯಿತು" ಎಂದೂ ಅವರು ಹೇಳಿದರು.

ಅಮಾನ್ಯೀಕರಣದಿಂದ ಜನರ ಮೇಲೆ ಉಂಟಾಗಿದೆಯೆನ್ನಲಾದ ಪರಿಣಾಮ ದೀರ್ಘಕಾಲಿಕವಲ್ಲ ಮತ್ತು ಅಂತ್ಯಗೊಂಡಿದೆ ಎಂದೂ ಅವರು ಹೇಳಿದರು.

ಅಮಾನ್ಯೀಕರಣದಂತಹ ಕ್ರಮದ ಕುರಿತು ಶಿಫಾರಸು ರಿಸರ್ವ್ ಬ್ಯಾಂಕ್‍ನಿಂದ ಬರಬೇಕಿದೆ ಎಂದು ಅರ್ಜಿದಾರರ ಪರ ವಕೀಲ ಪಿ ಚಿದಂಬರಂ ಅವರ ವಾದದ ಕುರಿತು  ನ್ಯಾಯಾಲಯ ಅಟಾರ್ನಿ ಜನರಲ್ ಅವರ ಪ್ರತಿಕ್ರಿಯೆ ಕೇಳಿತು.

"ರಿಸರ್ವ್ ಬ್ಯಾಂಕ್ ಅನ್ನು ಮೀರಿ ಸರಕಾರದಂತಹ ಬಾಹ್ಯ ಏಜನ್ಸಿ ಕ್ರಮಕೈಗೊಂಡಿದೆ ಎಂದು ಹೇಳುವ ಹಾಗಿಲ್ಲ, ಸುಸ್ಥಿರ ಆರ್ಥಿಕತೆಗಾಗಿ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ನಡುವಿನ  ಪರಸ್ಪರ ಸೌಹಾರ್ದತೆಯ ಸಂಬಂಧದ ಬಗ್ಗೆ ನಾವು ಮಾತನಾಡುತ್ತಿದ್ದೇವೆ" ಎಂದು ಅಟಾರ್ನಿ ಜನರಲ್ ಹೇಳಿದರು.

ಈ ಕ್ರಮದ ಉದ್ದೇಶ ಈಡೇರಿಸಲಾಗಿರುವ ವಿಚಾರ ಬಿಟ್ಟು ಈ ಕ್ರಮ ಕೈಗೊಳ್ಳುವಾಗ ಸೂಕ್ತ ಪ್ರಕ್ರಿಯೆ ಅನುಸರಿಸಲಾಗಿದೆಯೇ ಎಂಬುದನ್ನು ಅಟಾರ್ನಿ ಜನರಲ್ ಸಾಬೀತುಪಡಿಸಬೇಕು ಎಂದು ಜಸ್ಟಿಸ್ ಬೋಪಣ್ಣ ಹೇಳಿದರು.

ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 5 ರಂದು ನಡೆಯಲಿದೆ.

Similar News