ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರೆತಾಗ ಮಾತ್ರ ಶಾಂತಿ ಸ್ಥಾಪನೆಯಾಗುವುದು: ಅಮಿತ್ ಶಾಗೆ ಉವೈಸಿ ತಿರುಗೇಟು

Update: 2022-11-26 13:32 GMT

ಹೊಸದಿಲ್ಲಿ: "ಗಲಭೆಕೋರರಿಗೆ 2002 ರಲ್ಲಿ ಪಾಠ ಕಲಿಸಲಾಗಿದೆ," ಎಂದು ಗುಜರಾತ್ ಚುನಾವಣಾ ರ್ಯಾಲಿಯೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲೇ ಅದಕ್ಕೆ ತೀವ್ರವಾಗಿ ಆಕ್ಷೇಪಿಸಿ ತಿರುಗೇಟು ನೀಡಿರುವ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಅವರ ಪಾಠಗಳು ವಾಸ್ತವವಾಗಿ ಅಪರಾಧಿಗಳನ್ನು ಬಂಧನದಿಂದ ಬಿಡುಗಡೆಗೊಳಿಸುವ ಕುರಿತಾಗಿದೆ ಎಂದು  ಹೇಳಿದ್ದಾರೆ.

ಗುಜರಾತ್‍ನ ಅತಿ ದೊಡ್ಡ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಜುಹಾಪುರ ಎಂಬಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಓವೈಸಿ ಮಾತನಾಡುತ್ತಿದ್ದರು.

"ಗುಜರಾತ್ ಗಲಭೆಕೋರರಿಗೆ 2002 ರಲ್ಲಿ ಅವರು ಪಾಠ ಕಲಿಸಿದರು ಹಾಗೂ ಇದು ರಾಜ್ಯದಲ್ಲಿ ಖಾಯಂ ಶಾಂತಿ ಸ್ಥಾಪನೆಗೆ ಕಾರಣವಾಯಿತು ಎಂದು ಅಮಿತ್ ಶಾ ಇಂದು ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದ್ದಾರೆ. ಈ ಕ್ಷೇತ್ರ (ಅಹ್ಮದಾಬಾದ್) ಸಂಸದರಾಗಿರುವ ಅಮಿತ್ ಶಾಗೆ ನಾನು ಹೇಳಬಯಸುತ್ತೇನೆ, ನೀವು 2002 ರಲ್ಲಿ ಕಲಿಸಿದ ಪಾಠವೇನೆಂದರೆ ಬಿಲ್ಕಿಸ್ ಅತ್ಯಾಚಾರಿಗಳನ್ನು ನೀವು ಬಿಡುಗಡೆಗೊಳಿಸುತ್ತೀರಿ ಎಂಬುದು, ನೀವು ಬಿಲ್ಕಿಸ್‍ಳ ಮೂರು ವರ್ಷದ ಪುತ್ರಿಯ ಕೊಲೆಗಾರರನ್ನು ಬಿಡುಗಡೆಗೊಳಿಸಬಹುದೆಂಬ ಪಾಠ ಕಲಿಸಿದ್ದೀರಿ. ಎಹ್ಸಾನ್ ಜಾಫ್ರಿ ಅವರನ್ನು ಕೊಲ್ಲಬಹುದು ಎಂಬ ಪಾಠವನ್ನೂ ಕಲಿಸಿದ್ದೀರಿ,'' ಎಂದು ಓವೈಸಿ ಹೇಳಿದರು.

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಹಾಗೂ ಬೆಸ್ಟ್ ಬೇಕರಿ ಘಟನೆಯನ್ನು ಉಲ್ಲೇಖಿಸಿದ ಓವೈಸಿ "ಎಷ್ಟು ಪಾಠಗಳನ್ನು ನಾವು ನೆನಪಿಸಿಕೊಳ್ಳಬೇಕು, ಅಮಿತ್ ಶಾ ಅವರೇ? ಪಾಠ ಕಲಿಸುವುದು ಏನೂ ಅಲ್ಲ,  ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರೆತಾಗ ಮಾತ್ರ ಶಾಂತಿ ಬಲಗೊಳ್ಳುವುದು ಎಂಬುದನ್ನು ನೆನಪಿಡಿ," ಎಂದರು.

"ಅಧಿಕಾರ ಯಾವತ್ತೂ ಒಬ್ಬನೇ ವ್ಯಕ್ತಿ ಬಳಿ ಇರುವುದರಿಲ್ಲ. ಒಂದು ದಿನ ಅಧಿಕಾರ ಎಲ್ಲರಿಂದಲೂ ಸೆಳೆಯಲ್ಪಡುವುದು, ಅಧಿಕಾರದ ಮದದಲ್ಲಿ ಗೃಹ ಸಚಿವರು ತಾವು ಪಾಠ ಕಲಿಸಿದ್ದಾಗಿ ಹೇಳಿದ್ದಾರೆ. ನೀವು ಯಾವ ಪಾಠ ಕಲಿಸಿದ್ದೀರಿ? ನೀವು ಇಡೀ ದೇಶದಲ್ಲಿ ಕುಖ್ಯಾತಿ ಪಡೆದಿರಿ," ಎಂದು ಓವೈಸಿ ಪ್ರಶ್ನಿಸಿದರು.

Similar News