ಉಮರ್ ಖಾಲಿದ್ ಗೆ ಮಧ್ಯಂತರ ಜಾಮೀನು ನೀಡಿದರೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳುಸುದ್ದಿ ಹರಡಬಹುದು: ದಿಲ್ಲಿ ಪೊಲೀಸ್

Update: 2022-11-26 13:56 GMT

ಹೊಸದಿಲ್ಲಿ: ಉಮರ್ ಖಾಲಿದ್(Umar Khalid) ಗೆ ಮಧ್ಯಂತರ ಜಾಮೀನು ನೀಡಿದರೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳುಸುದ್ದಿ ಹರಡಬಹುದು ಮತ್ತು ಅಶಾಂತಿಯನ್ನುಂಟು ಮಾಡಬಹುದು ಎಂದು ದಿಲ್ಲಿ ಪೊಲೀಸರು ಇಲ್ಲಿಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತನ್ನ ಸೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಎರಡು ವಾರಗಳ ಮಧ್ಯಂತರ ಜಾಮೀನು ಕೋರಿ ಖಾಲಿದ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಶುಕ್ರವಾರ ನಡೆದ ಸಂದರ್ಭ ಪೊಲೀಸರು ಈ ನಿವೇದನೆಯನ್ನು ಸಲ್ಲಿಸಿದರು.

2020,ಫೆ.23 ಮತ್ತು 26ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಗಲಭೆಗಳಿಗೆ ಸಂಬಂಧಿಸಿದಂತೆ ಖಾಲಿದ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಗಲಭೆಗಳಲ್ಲಿ 53 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.

ಖಾಲಿದ್ ಹೆತ್ತವರಿಂದ ಮತ್ತು ಮದುವೆ ಸ್ಥಳದ ಮ್ಯಾನೇಜರ್ನಿಂದ ಮದುವೆಯ ಬಗ್ಗೆ ತಾವು ದೃಢಪಡಿಸಿಕೊಂಡಿರುವುದಾಗಿ ಶುಕ್ರವಾರ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ಆದಾಗ್ಯೂ, ಖಾಲಿದ್ ಯುಎಪಿಎ ಅಡಿ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡುವುದನ್ನು ವಿರೋಧಿಸಿದರು. ಖಾಲಿದ್ ರನ್ನು 2020,ಸೆ.13ರಂದು ಬಂಧಿಸಲಾಗಿದ್ದು,ಆಗಿನಿಂದ ಜೈಲಿನಲ್ಲಿದ್ದಾರೆ.

ಬಿಡುಗಡೆಗೊಳಿಸಿದರೆ ಖಾಲಿದ್ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಪ್ರತಿಪಾದಿಸಿದ ಪೊಲೀಸರು, ಖಾಲಿದ್ ಸಲ್ಲಿಸಿದ್ದ ನಿಯಮಿತ ಜಾಮೀನು ಅರ್ಜಿಯನ್ನು ಈ ನ್ಯಾಯಾಲಯ ಮತ್ತು ಮೇಲ್ಮನವಿಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿವೆ. ಅಲ್ಲದೆ ಖಾಲಿದ್ ಹೆತ್ತವರು ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದರು. 

ವಿಚಾರಣೆಯನ್ನು ನ್ಯಾಯಾಲಯವು ಮುಂದಿನ ವಾರಕ್ಕೆ ಮುಂದೂಡಿದೆ.

Similar News