ಮಹಾರಾಷ್ಟ್ರದ ಗಡಿ ತಗಾದೆ: ಸಚಿವ ಡಾ. ಅಶ್ವತ್ಥ ನಾರಾಯಣ ಖಂಡನೆ

‘ಶಿವಸೇನೆ ತನ್ನ ರಾಜಕೀಯ ಅಸ್ತಿತ್ವಕ್ಕೆ ಬೇಕಾಗಿರುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದೆ’

Update: 2022-11-26 14:21 GMT

ಕೋಟ, ನ.26: ಬೆಳಗಾವಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ತೆಗೆದಿರುವ ಗಡಿ ತಗಾದೆ ಹಾಗೂ ರಾಜ್ಯ ಸರಕಾರದ ಧೋರಣೆಯನ್ನು ತಾನು ಖಂಡಿಸುವುದಾಗಿ ರಾಜ್ಯ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ -ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ.ಅಶ್ವತ್ಥ ನಾರಾಯಣ ಸಿ.ಎನ್. ಹೇಳಿದ್ದಾರೆ.

ಕೋಟ ವಿವೇಕ ವಿದ್ಯಾ ಸಂಸ್ಥೆ ಆವರಣದಲ್ಲಿ ನಡೆದಿರುವ ‘ಹೊಳಪು-2022’ ರಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಇತ್ಯರ್ಥಗೊಂಡಿರುವ ವಿಚಾರವನ್ನು ಮತ್ತೆ ಮತ್ತೆ ಕೆದಕಬೇಡಿ ಎಂದ ಅವರು, ಜನರ ಭಾವನೆಯನ್ನು ಕೆರಳಿಸುವುದು ಖಂಡನೀಯ ವಿಚಾರ. ಇಂತಹ ವಿಚಾರಗಳಿಗೆ ನಾಗರಿಕರು ಬಲಿಯಾಗಬಾರದು. ನಾವು ಜೊತೆಯಾಗಿ ಬದುಕಿ ಬಾಳ ಬೇಕು. ಪ್ರಚೋದನೆಗಳಿಗೆ ಬಲಿಯಾಗದೇ ನಾವೆಲ್ಲರೂ ಭಾರತೀಯರು ಎಂಬ ಭಾವನೆಯಲ್ಲಿ ಮುಂದೆ ಸಾಗೋಣ ಎಂದು ಮನವಿ ಮಾಡಿದರು.

‘ಯಾವುದೇ ಅಹಿತಕರ ಘಟನೆ ಸಂಭವಿಸಬಾರದು. ಯಾವುದೇ ಗದ್ದಲಕ್ಕೆ ಅವಕಾಶವಿಲ್ಲದಂತೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮಹಾರಾಷ್ಟ್ರ ದಲ್ಲಿ ಸಮ್ಮಿಶ್ರ ಸರಕಾರ ಇದೆ. ಶಿವಸೇನೆ ತನ್ನ ರಾಜಕೀಯ ಅಸ್ತಿತ್ವಕ್ಕೆ ಬೇಕಾಗಿರುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದೆ’ ಎಂದವರು ದೂರಿದರು.

ಭಾರತೀಯತೆ ಅನ್ನೋದು ಇವೆಲ್ಲವನ್ನು ಮೀರಿದ ವಿಚಾರ. ಕ್ಷುಲ್ಲಕ ರಾಜಕೀಯ ಮಾಡದೆ ನೂರೆಂಟು ಒಳ್ಳೆಯ ಕೆಲಸ ಮಾಡೋಣ. ನೆಲಜಲದ ವಿಚಾರದಲ್ಲಿ ಯಾವುದೇ ಪ್ರಚೋದನೆಯನ್ನು ನಾವು ಸಹಿಸುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಮಾಮೂಲಿ:  ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯ ಪಾತ್ರದ ಕುರಿತು ಪ್ರಶ್ನಿಸಿದಾಗ, ಮತದಾರರ ಪಟ್ಟಿ ಪರಿಷ್ಕರಣೆ ಎಲ್ಲಾ ಕಾಲದಲ್ಲೂ ನಡೆಯುತ್ತೆ. ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪು ಒಪ್ಪುಗಳಿದ್ದರೂ ಪರಿಷ್ಕರಣೆ ಆಗಬೇಕು, ಇದರಲ್ಲಿ ತಪ್ಪಿಲ್ಲ. ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಆಶಯ. ಮತದಾರನಿಗೆ ಮತದಾನ ಮಾಡಲು ಯಾವುದೇ ಅಡಚಣೆಗಳು ಇರಬಾರದು. ಅರ್ಹತೆ ಇರುವ ಪ್ರತಿಯೊಬ್ಬ ಭಾರತೀಯನೂ ಮತ ಚಲಾಯಿಸಬೇಕು ಎಂದರು.

ನಾವು ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ಕೊಡಲ್ಲ. ನಮ್ಮ ಸರಕಾರ ಹಾಗೂ ನಮ್ಮ ಪಕ್ಷ ಈ ವಿಚಾರದಲ್ಲಿ ಪಾರದರ್ಶಕವಾಗಿದೆ. ಮತದಾರ ಪಟ್ಟಿಯಲ್ಲಿ ಗೊಂದಲ ಉಂಟು ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಮತದಾನ ಅಕ್ರಮಗಳು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಸದ್ಯ ಪಾರದರ್ಶಕವಾದ ತನಿಖೆ ನಡೆಯುತ್ತಿದೆ. ಯಾವ ಮುಚ್ಚುಮರೆ ಇಲ್ಲದೆ ತನಿಖೆ ನಡೆಯುತ್ತಿದೆ. ಎಲ್ಲ ತಪ್ಪಿತಸ್ಥರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದವರು ಹೇಳಿದರು.

ಅಗತ್ಯವಿದ್ದರೆ ಮತ್ತಷ್ಟು ಹೆಚ್ಚಿನ ತನಿಖೆ ಮಾಡಿಸುತ್ತೇವೆ. ಇನ್ನು ಯಾವುದಾದರೂ ಸಂಘ ಸಂಸ್ಥೆಗಳು ಈ ರೀತಿಯ ಅಕ್ರಮ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಸಲಹೆ ಕೊಟ್ಟಿದ್ದೇನೆ. ಈ ಹಗರಣದಲ್ಲಿ ಯಾರಿದ್ದರೂ ಬಿಡಬೇಡಿ ಎಂದು ಹೇಳಿದ್ದೇನೆ. ನಾವು ಜನರ ಆಶೀರ್ವಾದ ಇರುವವರು, ಜನರ ಶಕ್ತಿಯಲ್ಲಿ ನಂಬುಗೆ ಇಟ್ಟುಕೊಂಡವರು. ಇಂತಹ ಯಾವುದೇ ಅಕ್ರಮ ದಾರಿಯಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಸಮರ್ಥಿಸಿಕೊಂಡರು.

ಚುನಾವಣಾ ಆಯೋಗದ ಮದ್ಯಪ್ರವೇಶಕ್ಕೆ ಸ್ವಾಗತ: ಈ ವಿಷಯದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿರುವುದು ಸ್ವಾಗತ. ಮತದಾರರ ಸ್ವಾತಂತ್ರ್ಯ ರಕ್ಷಣೆಗೆ ಚುನಾವಣಾ ಆಯೋಗ ಇದೆ. ಮತದಾರನ ಹಕ್ಕನ್ನು ಚುನಾವಣಾ ಆಯೋಗ ಕಾಪಾಡುತ್ತೆ. ಮತದಾರರ ಹಕ್ಕನ್ನು ಯಾವ ಸಂದರ್ಭದಲ್ಲಿ ಯಾರು ಕಸಿಯಬಾರದು. ಚಿಲುಮೆ ಸಂಸ್ಥೆಗೆ ಪೊಲೀಸ್ ನೋಟಿಸ್ ನೀಡಿರುವ ವಿಚಾರದಲ್ಲಿ ಮಾತನಾಡಿದ ಅವರು ಪೊಲೀಸ್ ನೋಟಿಸ್ ನೀಡಿರುವುದು ಒಳ್ಳೆಯದೇ, ತನಿಖೆ ಇನ್ನಷ್ಟು ಮುಕ್ತವಾಗಿ ಆಗಲಿ. ಇನ್ನಷ್ಟು ದಾಳಿ ಮಾಡಿ...ಸೀಝ್ ಮಾಡೋದು ಒಳ್ಳೆಯದೇ ಎಂದರು.

ಚಿಲುಮೆ ಪ್ರಕರಣದಲ್ಲಿ ಸ್ವತಹ ಅಶ್ವ‌ತ್ಥ ನಾರಾಯಣ್ ಮೇಲೆ ಆರೋಪ ಬಂದಿರುವ ಕುರಿತು ಪ್ರಶ್ನಿಸಿದಾಗ, ನನ್ನಲ್ಲಿ ಏನಾದರೂ ಆತಂಕ ನಿಮಗೆ ಕಾಣುತ್ತಿದ್ದೀಯಾ ಎಂದು ಮರು ಪ್ರಶ್ನಿಸಿದರು. ಆತಂಕ ಇರೋದು ಕಾಂಗ್ರೆಸ್ ನವರಿಗೆ. ನನ್ನ ಕ್ಷೇತ್ರದಲ್ಲಿ ಇಂತಹ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ತನ್ನ ಹಿತ್ತಲು ನೋಡಿದರೆ ಅದರ ಹಣೆಬರ ಗೊತ್ತಾಗುತ್ತೆ. ಕಾಂಗ್ರೆಸ್ ಪಕ್ಷದ ನಾಯಕರ ಹಿತ್ತಲಲ್ಲಿ ಬರೀ ಕೊಳಕು ತುಂಬಿದೆ. ಕಾಂಗ್ರೆಸ್ ಕಾರ್ಯಕರ್ತರಿಲ್ಲದ ಪಕ್ಷ. ಕಾಂಗ್ರೆಸ್ಸಿಗೆ ಜನರ ಆಶೀರ್ವಾದವೂ ಇಲ್ಲ, ಅದೊಂದು ಕುಟುಂಬದ ಪಕ್ಷ ಎಂದರು.

Similar News