ರಾಜ್ಯದಲ್ಲಿ ಸಮಾನ ನಾಗರಿಕತೆ ಸಂಹಿತೆ ಜಾರಿಗೆ ಸರಕಾರ ಬದ್ಧ: ಸಚಿವ ಸುನಿಲ್ ಕುಮಾರ್
ʼಬೆಳಗಾವಿಯಲ್ಲಿ ಕಿಡಿಗೇಡಿಗಳ ದಾಂಧಲೆ ಸಹಿಸುವುದಿಲ್ಲʼ
ಕೋಟ, ನ.26: ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎನ್ನುವ ಒಲವನ್ನು ಸಿಎಂ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಮ್ಮ ಸರಕಾರ ಸಂಪೂರ್ಣ ಬದ್ಧವಾಗಿದೆ. ಮುಂದಿನ ಅಧಿವೇಶನದ ಸಂದರ್ಭದಲ್ಲಿ ಕ್ಯಾಬಿನೆಟಿನಲ್ಲಿ ಇದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಕೋಟ ವಿವೇಕ ವಿದ್ಯಾ ಸಂಸ್ಥೆ ಆವರಣದಲ್ಲಿ ನಡೆದ ‘ಹೊಳಪು-2022’ ರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಕರ್ನಾಟಕ ದಲ್ಲಿ ಸಮಾನ ನಾಗರಿಕತೆ ಸಂಹಿತೆ ಜಾರಿಗೆ ನಮ್ಮ ಸರಕಾರ ಬದ್ಧವಾಗಿದೆ. ಈ ವಿಷಯದಲಿ ಮುಖ್ಯಮಂತ್ರಿಗಳ ನಿಲುವನ್ನು ಸ್ವಾಗತಿಸುತ್ತೇವೆ, ಬೆಂಬಲಿಸುತ್ತೇವೆ ಎಂದರು.
ಇದು ಯಾಕೆ ಬೇಕು ಎನ್ನುವ ಚರ್ಚೆ ಇಲ್ಲ. ಈ ಬಗ್ಗೆ ಎಲ್ಲರೂ ಒಂದಾಗಿ ಯೋಚನೆ ಮಾಡಬೇಕು, ಒಂದಾಗಿ ಚಟುವಟಿಕೆ ಮಾಡಬೇಕು. ಪ್ರತ್ಯೇಕತೆಗಳು ಎಲ್ಲೂ ಕೂಡ ನಿರ್ಮಾಣ ಆಗಬಾರದು. ಏಕರೂಪದ ಕಾನೂನು ಜಾರಿಗೆ ತರುತ್ತೇವೆ ಅಂತ ಬಿಜೆಪಿ ಹಲವು ವರ್ಷಗಳಿಂದ ಪ್ರಣಾಳಿಕೆಯಲ್ಲಿ ಹೇಳಿದೆ. ಇದನ್ನು ಜಾರಿ ತರಲು ಬೇರೆ ರಾಜ್ಯಗಳು ಸಹ ಈಗಾಗಲೇ ಮುಂದಾಗಿವೆ. ಕರ್ನಾಟಕ ರಾಜ್ಯ ಸಹ ಇದನ್ನು ಜಾರಿಗೊಳಿಸುತ್ತದೆ ಎಂದರು.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಕುರಿತಂತೆ ಮಾತನಾಡಿದ ಸುನಿಲ್ ಕುಮಾರ್, ಈ ರೀತಿಯ ಘಟನೆಗಳು ಬೇರೆ ಬೇರೆ ಭಾಗಕ್ಕೆ ವಿಸ್ತರಿಸುತ್ತಿದೆ. ಹಿಂದೂ ಚಟುವಟಿಕೆಗಳನ್ನು ಕೇಂದ್ರೀಕರಿಸಿಕೊಂಡು ಇಂತಹ ದಾಳಿ ನಡೆಯುತ್ತಿದೆ. ಕದ್ರಿ ದೇವಸ್ಥಾನದ ವಿರುದ್ಧ ಹುನ್ನಾರ ನಡೆದಿತ್ತು ಎಂದು ವಿವರಿಸಿದರು.
ಆರೋಪಿ ಆಧಾರ್ ಕಾರ್ಡ್ ಬದಲಾವಣೆ ಮಾಡಿ, ಕೇಸರಿ ಧರಿಸಿದ್ದಾನೆ. ಇದು ಇಸ್ಲಾಮಿನ ಚಟುವಟಿಕೆಗಳನ್ನು ಇನ್ನಾವುದೋ ಸಂಘಟನೆಯ ಮೇಲೆ ಹೊರಿಸುವ ಹುನ್ನಾರವಾಗಿದೆ. ಇದನ್ನು ಬಗ್ಗು ಬಡಿದೆ ಬಡಿಯುತ್ತೇವೆ. ಯಾವುದೇ ಕಾರಣಕ್ಕೂ ಇಂತಹ ಚಟುವಟಿಕೆ ವಿಜೃಂಭಿಸಲು ಬಿಡುವುದಿಲ್ಲ. ಇದರ ಆಳ-ಅಗಲದ ತನಿಖೆಯನ್ನು ಎನ್‌ಐಎಗೆ ಕೊಟ್ಟಿದ್ದೇವೆ. ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುತ್ತದೆ ಎಂದರು.
ಮಂಗಳೂರಲ್ಲಿ ಎನ್‌ಐಎ ಕಚೇರಿ: ಕರಾವಳಿಯಲ್ಲಿ ಎನ್‌ಐಎ ಕಚೇರಿ ತೆರೆಯುವ ಕುರಿತು ವಿವರಿಸಿದ ಸಚಿವರು, ಎನ್‌ಐಎ ಕೇಂದ್ರ ಸ್ಥಾಪನೆಗೆ ಬೇಕಾದ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ. ಮಂಗಳೂರನ್ನು ಕೇಂದ್ರೀಕರಿಸಿ ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದರು.
ಕಿಡಿಗೇಡಿಗಳ ದಾಂಧಲೆ ಸಹಿಸುವುದಿಲ್ಲ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಕಿಡಿಗೇಡಿಗಳ ದಾಂಧಲೆಯನ್ನು ಖಂಡಿಸಿದ ಸುನಿಲ್ ಕುಮಾರ್, ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿ ಗಳು ಈ ವಿಚಾರವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.
ನೆಲ, ಜಲ, ಭಾಷೆ ವಿಚಾರವಾಗಿ ರಾಜಕೀಯ ಇಲ್ಲ. ನಮ್ಮ ರಾಜ್ಯದ ನೆಲ ಜಲದ ಸಂಸ್ಕೃತಿಯನ್ನು, ಭೂಭಾಗದ ಗಡಿಪ್ರದೇಶವನ್ನು ಉಳಿಸಲು ನಮ್ಮತನವನ್ನು ಗಟ್ಟಿ ಮಾಡುವುದಕ್ಕೆ ನಾವೆಲ್ಲರೂ ಕೂಡ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಯಾರೋ ಬರೆದಿದ್ದಾರೆ ಅಂತ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೆ ಗೌರವ ಕೊಡಬೇಕಾಗಿರುವುದು ಪ್ರಜಾಪ್ರಭುತ್ವದ ಕರ್ತವ್ಯ. ಇದನ್ನು ಪುಂಡರು ಮಾಡುತ್ತಿದ್ದಾರೆ ಅಂದರೆ ಕಾನೂನಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸುನಿಲ್ ಕುಮಾರ್ ನುಡಿದರು.
ರಾಜ್ಯದಲ್ಲಿ ಚಿಲುಮೆ ಸಂಸ್ಥೆ ನಡೆಸಿದ ಹಗರಣದ ಬಗ್ಗೆ ಪ್ರಶ್ನಿಸಿದಾಗ, ಈಗಾಗಲೇ ಇದನ್ನು ತನಿಖೆಗೆ ಒಳಪಡಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ. ಕೆಲವು ಜನರ ಬಂಧನ ಆಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುವುದಕ್ಕೆ ಯಾವುದೇ ಸಂಸ್ಥೆ ಮುಂದಾಗುವ ಪ್ರಶ್ನೆ ಇಲ್ಲ. ನಮ್ಮ ಸರಕಾರ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.