ಅಸ್ಸಾಂ ಪೊಲೀಸರಿಂದ ಮಾನವಹಕ್ಕುಗಳ ಉಲ್ಲಂಘನೆ: ಮೇಘಾಲಯ ಮುಖ್ಯಮಂತ್ರಿ ಸಂಗ್ಮಾ ಎನ್ಎಚ್ಆರ್ಸಿ ಅಧಿಕಾರಿಗಳೊಂದಿಗೆ ಭೇಟಿ

Update: 2022-11-26 16:33 GMT

ಗುವಾಹಟಿ,ನ.26: ಅಸ್ಸಾಂ-ಮೇಘಾಲ(Assam-Meghala)ಯ ಗಡಿಯಲ್ಲಿ ಕಳೆದ ಮಂಗಳವಾರ ಅಸ್ಸಾಂ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟ ಘಟನೆಯು ಮಾನವಹಕ್ಕುಗಳ ಉಲ್ಲಂಘನೆಯ ಸ್ಪಷ್ಟ ನಿದರ್ಶನವಾಗಿದೆ ಎಂದು ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ (Konrad Sangma)ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೆ ತಿಳಿಸಿದ್ದಾರೆ.

 ಅಧ್ಯಕ್ಷ ಅರುಣ್ ಮಿಶ್ರಾ(Arun Mishra) ಸೇರಿದಂತೆ ರಾಷ್ಟ್ರೀಯ ಮಾನವಹಕ್ಕು ಆಯೋಗದ ಅಧಿಕಾರಿಗಳನ್ನು ಸಂಗ್ಮಾ ಅವರು ಶುಕ್ರವಾ ಭೇಟಿಯಾಗಿ ಮಾತುಕತೆ ನಡೆಸಿದ್ದರು.

  ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಸಂಗ್ಮಾ ಅವರು, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮಾನವಹಕ್ಕು ಆಯೋಗವನ್ನು ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ. ಸೂಕ್ಷ್ಮಸಂವೇದಿ ಗಡಿಪ್ರದೇಶಗಳಲ್ಲಿ ನಿಯೋಜಿಸಲ್ಪಟ್ಟಿರುವ ಭದ್ರತಾಪಡೆಗಳಲ್ಲಿ ಸಮರ್ಪಕವಾದ ಅರಿವು ಉಂಟು ಮಾಡಬೇಕಾದ ಅಗತ್ಯವನ್ನು ಕೂಡಾ ಮಾನವಹಕ್ಕು ಆಯೋಗದ ಅಧಿಕಾರಿಗಳಿಗೆ ಮನವರಿಕೆ ಮಾಡಿರುವುದಾಗಿ ಅವರು ಟ್ವೀಟಿಸಿದ್ದಾರೆ .

ಅಸ್ಸಾಂ ಪೊಲೀಸರ ಗುಂಡಿನ ದಾಳಿಯ ಘಟನೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಸಂಗ್ಮಾ ಅವರು ಮಾನವಹಕ್ಕುಗಳ ಆಯೋಗವನ್ನು ಆಗ್ರಹಿಸಿದ್ದಾರೆ. ಅಸ್ಸಾಂ ಪೊಲೀಸರ ಗುಂಡೆಸೆತಕ್ಕೆ ಬಲಿಯಾದವರಲ್ಲಿ ಐವರು ಮೇಘಾಲಯದ ನಿವಾಸಿಗಳಾಗಿದ್ದು, ಇನ್ನೋರ್ವ ಅಸ್ಸಾಂ ಅರಣ್ಯ ರಕ್ಷಕನೆಂದು ಸಂಗ್ಮಾ ಹೇಳಿದದರು. ಆದರೆ ನಾಲ್ವರು ವ್ಯಕ್ತಿಗಳು ಗುಂಡಿನ ದಾಳಿಗೆ ಬಲಿಯಾದ ಸ್ಥವು ತನ್ನ ರಾಜ್ಯದ ವ್ಯಾಪ್ತಿಯಲ್ಲಿದೆಯೆಂದು ಅಸ್ಸಾಂ ಸರಕಾರ ಹೇಳಿಕೊಂಡಿದೆ.

ಕಳೆದ ಮಂಗಳವಾರ ಮೇಘಾಲಯ-ಅಸ್ಸಾಂ ಗಡಿಯಲ್ಲಿರುವ ಮೊಯಿಕ್ರಾಂಗ್ ಗ್ರಾಮದ ಬಳಿ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಟ್ರಕ್ ಒಂದನು ಅಸ್ಸಾಂ ಪೊಲೀಸರು ತಡೆದು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಅಸ್ಸಾಂ ಪೊಲೀಸರು ನಡೆಸಿದ ಗುಂಡು ಹಾರಾಟದಲ್ಲಿ ಓರ್ವ ಅರಣ್ಯ ರಕ್ಷಕ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು.

1971ರ ಅಸ್ಸಾಂ ಪುನರ್ಸಂಘಟನೆ ಕಾಯ್ದೆಯಡಿ 1972ರ ಜನವರಿ 21ರಂದು ಅಸ್ಸಾಂನಿಂದ ಬೇರ್ಪಟ್ಟು ಮೇಘಾಲಯ ರಾಜ್ಯ ರೂಪುಗೊಂಡಾಗ ಉಭಯ ರಾಜ್ಯಗಳ ನಡುವೆ ಗಡಿವಿವಾದ ಆರಂಭಗೊಂಡಿತು.

Similar News