ಗುಜರಾತ್ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಸಮಾನ ನಾಗರಿಕ ಸಂಹಿತೆ ಜಾರಿಯ ಭರವಸೆ

Update: 2022-11-26 16:58 GMT

 ಗಾಂಧಿನಗರ,ನ.26: ಮುಂದಿನ ತಿಂಗಳು ನಡೆಯಲಿರುವ ಗುಜರಾತ್ (Gujarat)ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯು ತನ್ನ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆಗೊಳಿಸಿದ್ದು, ರಾಜ್ಯದಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೇರಿದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಭರವಸೆಯನ್ನು ನೀಡಲಾಗಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda)ಅವರು ಗಾಂಧಿನಗರದಲ್ಲಿನ ಬಿಜೆಪಿಯ ರಾಜ್ಯ ಕಾರ್ಯಾಲಯ ಶ್ರೀಕಮಲಂ(Srikamalam)ನಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯಾದ ‘ಸಂಕಲ್ಪ ಪತ್ರ’('Letter of Intent')ವನ್ನು ಬಿಡುಗಡೆಗೊಳಿಸಿದರು.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಭಾಯ್ ಪಟೇಲ್ (Bhupendra Bhai Patel)ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್(C.R. Patil) ಉಪಸ್ಥಿತರಿದ್ದರು.

ಅಂಗನವಾಡಿಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆಯನ್ನೂ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ವೈದ್ಯಕೀಯ ವಿಮಾ ಸುರಕ್ಷೆಯನ್ನು ಐದು ಲಕ್ಷ ರೂ.ಗಳಿಂದ 10 ಲಕ್ಷ ರೂ.ಗೆ ಏರಿಸುವ ಅಶ್ವಾಸನೆಯನ್ನು ಕೂಡಾ ನೀಡಲಾಗಿದೆ.

ಗುಜರಾತ್ ನ ಯುನಜನತೆಗೆ 20 ಲಕ್ಷ ಉದ್ಯೋಗ ಸೃಷ್ಟಿ, ಮಹಿಳಾ ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಮ, ಬುಡಕಟ್ಟು ಜನರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂ. ಅನುದಾನದ ಭರವಸೆಯನ್ನು ಕೂಡಾ ಪ್ರಣಾಳಿಕೆಯಲ್ಲಿ ನೀಡಲಾಗಿದೆ.

  ಗುಜರಾತ್ ನ ರಕ್ಷಣಾ ಹಾಗೂ ವಾಯುಯಾನಕ್ಕೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕಾ ಕೇಂದ್ರವಾಗಿ ರೂಪಿಸುವುದು, ರಾಜ್ಯವನ್ನು 1 ಟ್ರಿಲಿಯನ್ ಆರ್ಥಿಕತೆಯ ರಾಜ್ಯವಾಗಿ ರೂಪಿಸುವುದು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಹೂಡಿಕೆ , ಇವು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಇತರ ಕೆಲವು ಪ್ರಮುಖ ಭರವಸೆಗಳಾಗಿವೆ.

Similar News