ತಮಿಳುನಾಡು: ಹಿಂದಿ ಹೇರಿಕೆ ವಿರೋಧಿಸಿ 85 ವರ್ಷದ ರೈತ ಡಿಎಂಕೆ ಕಚೇರಿ ಎದುರು ಆತ್ಮಾಹುತಿ

Update: 2022-11-26 18:00 GMT

ಚೆನ್ನೈ, ನ. 26: ಹಿಂದಿ ಹೇರಿಕೆ ವಿರೋಧಿಸಿ ತಮಿಳುನಾಡಿನ ಸೇಲಂ ಜಿಲ್ಲೆಯ 85 ವರ್ಷದ ರೈತರೋರ್ವರು ಡಿಎಂಕೆ ಕಚೇರಿಯ ಹೊರಗೆ ಶನಿವಾರ ಆತ್ಮಾಹುತಿ ಮಾಡಿಕೊಂಡಿದ್ದಾರೆ.

ಡಿಎಂಕೆಯ ಕೃಷಿ ಒಕ್ಕೂಟದ ಮಾಜಿ ಸಂಘಟಕರಾಗಿದ್ದ ತಂಗವೇಲ್ ಅವರು ತಲೈಯೂರಿನಲ್ಲಿರುವ ಡಿಎಂಕೆಯ ಕಚೇರಿಯ ಮುಂದೆ ಬೆಳಗ್ಗೆ 11 ಗಂಟೆಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು ಹಾಗೂ ಸ್ಥಳದಲ್ಲೇ ಮೃತಪಟ್ಟರು.
ಹಿಂದಿಯನ್ನು ಶಿಕ್ಷಣದ ಮಾಧ್ಯಮವಾಗಿ ಜಾರಿಗೆ ತರುವ ಕೇಂದ್ರ ಸರಕಾರದ  ನಿರ್ಧಾರದಿಂದ ಡಿಎಂಕೆಯ ಸಕ್ರಿಯ ಸದಸ್ಯರಾಗಿದ್ದ ತಂಗವೇಲು ಅವರು ತೀವ್ರ ವಿಚಲಿತರಾಗಿದ್ದರು.
ರಾಜ್ಯದ ಮೇಲೆ ಹಿಂದಿ ಹೇರಿದರೆ ಹೊಸದಿಲ್ಲಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ತಮಿಳುನಾಡು ಆಡಳಿತಾರೂಡ ಡಿಎಂಕೆಯ ಯುವ ಘಟಕದ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ.
ಪಕ್ಷ ಸಾಮೂಹಿಕ ಪ್ರತಿಭಟನೆ ನಡೆಸಿದೆ ಹಾಗೂ ಜನರ ಭಾವನೆಗಳನ್ನು ಕಡೆಗಣಿಸಿದರೆ ಪಕ್ಷ ಮೂಕ ಪ್ರೇಕ್ಷಕವಾಗಿ ಕುಳಿತುಕೊಳ್ಳಲಾರದು ಎಂದು ಎಚ್ಚರಿಸಿದೆ.

Similar News