ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬುದು ಸುಳ್ಳು: ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟನೆ

ಆಟೊ ರಿಕ್ಷಾದಲ್ಲಿ ಸ್ಫೋಟ ಪ್ರಕರಣ

Update: 2022-11-27 11:35 GMT

ಮಂಗಳೂರು, ನ.27: ರಾ.ಹೆ.75ರ ಪಡೀಲ್ ಸಮೀಪದ ನಾಗುರಿಯಲ್ಲಿ ನ.19ರಂದು ಆಟೊ ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿ ಮುಹಮ್ಮದ್ ಶಾರೀಕ್‌ನನ್ನು ನಾನು ವಿಚಾರಣೆ ಮಾಡಿದ್ದೇನೆ ಎಂಬುದು ಬರೀ ಸುಳ್ಳು. ಈವರೆಗೆ ನಾನು ಆತನ ವಿಚಾರಣೆಯನ್ನೇ ಮಾಡಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಆರೋಪಿಯನ್ನು ಪೊಲೀಸ್ ಕಮಿಷನರ್ ವಿಚಾರಣೆ ನಡೆಸಿದ್ದಾರೆ, ತನಿಖಾಧಿಕಾರಿಯ ಮುಂದೆ ಆತ ಹೇಳಿಕೆ ನೀಡಿದ್ದಾನೆ. ಕದ್ರಿ ದೇವಸ್ಥಾನ, ಸಂಘ ನಿಕೇತನಕ್ಕೆ ಹಾನಿಗೆಡಹುವ ಉದ್ದೇಶವನ್ನು ಆತ ಹೊಂದಿದ್ದ ಎಂಬುದಾಗಿ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ 'ಸುದ್ದಿ' ಪ್ರಸಾರವಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸಹಿತ ತನಿಖಾಧಿಕಾರಿಯ ತಂಡವು ಆತನನ್ನು ವಿಚಾರಣೆಯನ್ನೇ ನಡೆಸಿಲ್ಲ. ಆತನ ಆರೋಗ್ಯ ಸುಧಾರಿಸದ ಕಾರಣ ಸದ್ಯ ಆತ ಯಾವ ಹೇಳಿಕೆಯನ್ನೂ ನೀಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಯಾವುದೇ ರೀತಿಯ ಗಾಳಿಸುದ್ದಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯ ಆರೋಗ್ಯ ಸುಧಾರಿಸುತ್ತಾ ಬಂದಿದೆ. ಆದರೆ ಆರೋಪಿ ಮುಹಮ್ಮದ್ ಶಾರೀಕ್‌ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಇದೊಂದು ಗಂಭೀರ ಪ್ರಕರಣವಾದ ಕಾರಣ ಪೊಲೀಸ್ ಭದ್ರತೆಯಲ್ಲೇ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ಇತರ ಪ್ರಕರಣದಂತಲ್ಲ. ಆತನಿಗೆ ಸುಟ್ಟ ಗಾಯವೂ ಆದ ಕಾರಣ ಸೋಂಕು ಬೇಗನೆ ಹರಡುವ ಸಾಧ್ಯತೆ ಇದೆ. ಹಾಗಾಗಿ ವೈದ್ಯರ ಅನುಮತಿಯಿಲ್ಲದೆ ಆತನ ಬಳಿ ಯಾರೂ ಹೋಗುವಂತೆಯೂ ಇಲ್ಲ. ಪೊಲೀಸರು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದರು.

ಆರೋಪಿಯ ಗುರುತು ಪತ್ತೆ ಮಾಡುವುದಕ್ಕಾಗಿ ಆತನ ಕುಟುಂಬಸ್ಥರಿಗೆ ಒಮ್ಮೆ ಅವಕಾಶ ನೀಡಲಾಗಿತ್ತು. ಅದು ಬಿಟ್ಟರೆ ಹಿರಿಯ ಪೊಲೀಸ್ ಅಧಿಕಾರಿಗಳ ಸಹಿತ ಈವರೆಗೆ ಯಾರೂ ಆತನನ್ನು ಮಾತನಾಡಿಸಿಲ್ಲ. ಆರೋಪಿಯು ಆರೋಗ್ಯವಾಗಿದ್ದಾನೆ ಎಂದು ವೈದ್ಯರು ದೃಢೀಕರಿಸುವವರೆಗೆ ಆತನ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಯಾರೂ ಗಾಳಿಸುದ್ದಿಗೆ ಕಿವಿಗೊಡಬಾರದು ಎಂದು ಶಶಿಕುಮಾರ್ ಮನವಿ ಮಾಡಿದ್ದಾರೆ.

Similar News