ಸಮಾಜವಾದಿ ಪಕ್ಷದ ಹ್ಯಾಂಡಲ್ ನಿಂದ ಅವಮಾನಕಾರಿ ಟ್ವೀಟ್ ಗಳನ್ನು ಮಾಡಿದ್ದ ಯುಟ್ಯೂಬರ್ ಸೆರೆ

Update: 2022-11-27 18:27 GMT

ಲಕ್ನೋ: ಸಮಾಜವಾದಿ ಪಕ್ಷ (ಎಸ್ಪಿ)ದ ಮಾಧ್ಯಮ ಘಟಕದ ಟ್ವಿಟರ್ ಹ್ಯಾಂಡಲ್ನಿಂದ ಆಕ್ಷೇಪಾರ್ಹ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ದ ಆರೋಪದಲ್ಲಿ ಯುಟ್ಯೂಬರ್ನೋರ್ವನನ್ನು ಉ.ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧಿತ ವ್ಯಕ್ತಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಎಸ್ಪಿ ನಾಯಕರು ಹೇಳಿದ್ದಾರೆ.

ಅಪರಿಚಿತ ವ್ಯಕ್ತಿಯೋರ್ವ ಎಸ್ಪಿ ಮಾಧ್ಯಮ ಘಟಕದ ಟ್ವಿಟರ್ ಹ್ಯಾಂಡಲ್ ನಿರ್ವಹಿಸುತ್ತಿದ್ದಾನೆ ಎಂದು ಆರೋಪಿಸಿ ಪತ್ರಕರ್ತ ಮನೀಷ್ ಪಾಂಡೆ ನ.23ರಂದು ಹಝರತ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
  
ಎಸ್ಪಿ ಮಾಧ್ಯಮ ಘಟಕವು ಗೋರಖ್ ನಾಥ ಮಠದ ಕುರಿತು ಟ್ವೀಟ್ ಅನ್ನು ಪೋಸ್ಟ್ ಮಾಡಿತ್ತು ಮತ್ತು ಮಠವು ಕೋಟ್ಯಂತರ ಜನರ ಶ್ರದ್ಧೆಯ ಕೇಂದ್ರವಾಗಿರುವುದರಿಂದ ಇಂತಹ ಪೋಸ್ಟ್ಗಳನ್ನು ಮಾಡುವುದರಿಂದ ಅದು ದೂರವಿರಬೇಕು ಎಂದು ತಾನು ಉತ್ತರಿಸಿದ್ದೆ. ನಂತರ ಟ್ವಿಟರ್ ಹ್ಯಾಂಡಲ್ನಿಂದ ತನ್ನ ವಿರುದ್ಧ ಅವಮಾನಕಾರಿ ಮತ್ತು ಅವಹೇಳನಕಾರಿ ಟ್ವೀಟ್ಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ಪಾಂಡೆ ದೂರಿನಲ್ಲಿ ಆರೋಪಿಸಿದ್ದರು. ಮಠದಲ್ಲಿಯ ಜನರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ನ.20ರ ಟ್ವೀಟ್ನಲ್ಲಿ ಎಸ್ಪಿ ಮಾಧ್ಯಮ ಘಟಕವು ಆರೋಪಿಸಿತ್ತು,ಆದರೆ ಟ್ವೀಟ್ನಲ್ಲಿ ಯಾವುದೇ ಮಠವನ್ನು ಹೆಸರಿಸಿರಲಿಲ್ಲ.

ಯುಟ್ಯೂಬ್ ಚಾನೆಲ್ವೊಂದನ್ನು ನಡೆಸುತ್ತಿರುವ ಅನಿಲ್ ಯಾದವ ಎಂಬಾತ ಎಸ್ಪಿ ಮಾಧ್ಯಮ ಘಟಕದ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದ್ದು,ಚಶುಕ್ರವಾರ ಆತನನ್ನು ಬಂಧಿಸಲಾಗಿದೆ. ಈ ಕುರಿತು ವಿವರವಾದ ತನಿಖೆ ನಡೆಯುತ್ತಿದೆ ಎಂದು ಎಸಿಪಿ ಅರವಿಂದ ಕುಮಾರ ವರ್ಮಾ ಸುದ್ದಿಸಂಸ್ಥೆಗೆ ತಿಳಿಸಿದರು.

ಅನಿಲ ಯಾದವ ತನ್ನ ಯುಟ್ಯೂಬ್ ಚಾನೆಲ್ನ ಮೂಲಕ ಬಿಜೆಪಿ ಸರಕಾರದಡಿ ಜನರು ಎದುರಿಸುತ್ತಿರುವ ದೌರ್ಜನ್ಯಗಳು ಮತ್ತು ಅನ್ಯಾಯಗಳನ್ನು ಬಹಿರಂಗಗೊಳಿಸುತ್ತಿದ್ದರು. ಇದರಿಂದ ಕುಪಿತ ಬಿಜೆಪಿ ಅವರ ಅಸಾಂವಿಧಾನಿಕ ಬಂಧನಕ್ಕೆ ಕಾರಣವಾಗಿದೆ ಎಂದು ಶನಿವಾರ ಟರಣಿ ಟ್ವೀಟ್ಗಳಲ್ಲಿ ಎಸ್ಪಿ ಮಾಧ್ಯಮ ಘಟಕವು ಆರೋಪಿಸಿದೆ. ಅನಿಲ ಯಾದವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಮತ್ತು ಗೌರವದಿಂದ ಮನೆಗೆ ಮರಳಿ ಕಳುಹಿಸಬೇಕು ಎಂದು ಅದು ಆಗ್ರಹಿಸಿದೆ.

Similar News