ರಾಜಸ್ಥಾನದಲ್ಲಿ ಪಕ್ಷವನ್ನು ಬಲಪಡಿಸಲು ಅಗತ್ಯವಿದ್ದರೆ ಕಾಂಗ್ರೆಸ್ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತದೆ: ಜೈರಾಮ್ ರಮೇಶ್

Update: 2022-11-28 07:29 GMT

ಹೊಸದಿಲ್ಲಿ: "ರಾಜಸ್ಥಾನದಲ್ಲಿ ಪಕ್ಷವನ್ನು ಬಲಪಡಿಸಲು ಅಗತ್ಯವಿದ್ದರೆ ಕಾಂಗ್ರೆಸ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ'' ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ Jairam Ramesh ರವಿವಾರ ಹೇಳಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ  ಮಾಜಿ ಉಪ ಮುಖ್ಯಮಮತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಮೇಶ್ ಈ ಹೇಳಿಕೆ ನೀಡಿದ್ದಾರೆ.

ಗುರುವಾರ NDTVಗೆ ನೀಡಿದ ಸಂದರ್ಶನದಲ್ಲಿ, ಪೈಲಟ್‌ರನ್ನು ವಿಶ್ವಾಸದ್ರೋಹಿ ಎಂದು ಕರೆದ ಗೆಹ್ಲೋಟ್, ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಟೋಂಕ್ ಶಾಸಕ ಪೈಲಟ್  ಅವರನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಲು ಈ ರೀತಿಯ ಭಾಷೆಯನ್ನು ಬಳಸುವುದು ಅವರ ಸ್ಥಾನಮಾನಕ್ಕೆ ತಕ್ಕುದಲ್ಲ ಎಂದು ಪೈಲಟ್ ತಿರುಗೇಟು ನೀಡಿದ್ದರು.

ಆಗಸ್ಟ್ 2020 ರಲ್ಲಿ ರಾಜಸ್ಥಾನ ಸರಕಾರವನ್ನು ರಾಜಕೀಯ ಬಿಕ್ಕಟ್ಟಿಗೆ ತಳ್ಳಿದ್ದ ಪೈಲಟ್ ಬಂಡಾಯವನ್ನು ಉಲ್ಲೇಖಿಸಿ ಗೆಹ್ಲೋಟ್ ಅವರು ಈ ಹೇಳಿಕೆ ನೀಡಿದ್ದಾರೆ. ತನ್ನನ್ನು ಮುಖ್ಯಮಂತ್ರಿ ಮಾಡಬೇಕೆಂದು ಪೈಲಟ್ ಪಟ್ಟು ಹಿಡಿದಿದ್ದರು. ಪೈಲಟ್ ಅವರ ಕಳವಳಗಳನ್ನು ಪರಿಹರಿಸಲು ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್ ಹಾಗೂ  ಅಹ್ಮದ್ ಪಟೇಲ್ ಅವರನ್ನೊಳಗೊಂಡ ಮೂರು ಸದಸ್ಯರ ಸಮಿತಿಯನ್ನು ರಚಿಸಿದ ನಂತರ ಗೊಂದಲವನ್ನು ಪರಿಹರಿಸಲಾಗಿತ್ತು.

NDTV ಸಂದರ್ಶನದಲ್ಲಿ ಗೆಹ್ಲೋಟ್ ಅಂತಹ ಪದಗಳನ್ನು ಬಳಸಬಾರದಿತ್ತು ಎಂದು ರವಿವಾರ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ರಮೇಶ್ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಗೆಹ್ಲೋಟ್ ಹಾಗೂ  ಪೈಲಟ್ ಇಬ್ಬರೂ ಸಮಾನವಾಗಿ ಪ್ರಮುಖರು ಎಂದು ರಮೇಶ್ ಹೇಳಿದ್ದಾರೆ ಎಂದು Hindustan Times ವರದಿ ಮಾಡಿದೆ.

" ಹಿರಿಯ ನಾಯಕ ಅಥವಾ ಯುವ ನಾಯಕನಿದ್ದರೂ ವ್ಯಕ್ತಿಯು ಮುಖ್ಯವಲ್ಲ . ಏಕೆಂದರೆ ವ್ಯಕ್ತಿಗಳು ಬಂದು ಹೋಗುತ್ತಾರೆ. ಸಂಘಟನೆ ಹೆಚ್ಚು ಮುಖ್ಯವಾಗಿದೆ’’ ಎಂದು ಭಾರತ್ ಜೋಡೊ ಯಾತ್ರೆಯ ವೇಳೆ ರಮೇಶ್ ಹೇಳಿದ್ದಾರೆ.

Similar News