ಸರಕಾರವು ಸರಿಯಾಗಿದ್ದರೆ ಮಾಧ್ಯಮಗಳು ಅದನ್ನು ಹೇಳಬೇಕು: ಉದ್ಯಮಿ ಗೌತಮ್ ಅದಾನಿ

Update: 2022-11-28 08:13 GMT

ಹೊಸದಿಲ್ಲಿ: ಸುದ್ದಿವಾಹಿನಿ ಎನ್ಡಿಟಿವಿಯ (NDTV) ಸ್ವಾಧೀನವನ್ನು ತಾನು ವ್ಯವಹಾರದ ಅವಕಾಶಕ್ಕಿಂತ ಹೆಚ್ಚಾಗಿ ಒಂದು ಹೊಣೆಗಾರಿಕೆಯಾಗಿ ಪರಿಗಣಿಸಿದ್ದೇನೆ ಎಂದು ಏಶ್ಯಾದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ (Gautam Adani) ಹೇಳಿದ್ದಾರೆ.

Financial Times ಗೆ ನೀಡಿದ ಸಂದರ್ಶನದಲ್ಲಿ, ಪ್ರಣಯ್ ರಾಯ್ ಒಡೆತನದ ಸುದ್ದಿವಾಹಿನಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನವು ಮಾಧ್ಯಮಗಳ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತದೆ ಎಂಬ ಕಳವಳಗಳನ್ನು ಅದಾನಿ ತಳ್ಳಿಹಾಕಿದ್ದಾರೆ.

ಸರಕಾರವು ಏನಾದರೂ ತಪ್ಪು ಮಾಡಿದ್ದರೆ ನೀವು ಅದನ್ನು ತಪ್ಪು ಎಂದು ಹೇಳುತ್ತೀರಿ, ಅದು ಸ್ವಾತಂತ್ರ. ಆದರೆ ಇದೇ ವೇಳೆ ಸರಕಾರವು ಪ್ರತಿದಿನ ಸರಿಯಾದ್ದನ್ನೇ ಮಾಡುತ್ತಿರುವಾಗ ಅದನ್ನು ಹೇಳುವ ಧೈರ್ಯವೂ ನಿಮಗಿರಬೇಕು ಎಂದರು.

ಎನ್ಡಿಟಿವಿಯಲ್ಲಿನ ಬಹುಪಾಲು ಬಂಡವಳವನ್ನು ವಶಪಡಿಸಿಕೊಳ್ಳುವ ತನ್ನ ಯೋಜನೆಯನ್ನು ಅದಾನಿ ಗ್ರೂಪ್ ಕಳೆದ ಆಗಸ್ಟ್ ನಲ್ಲಿ ಬಹಿರಂಗಗೊಳಿಸಿತ್ತು. ಸ್ವಾಧೀನ ಪ್ರಯತ್ನವು ಪತ್ರಕರ್ತರು ಮತ್ತು ರಾಜಕಾರಣಿಗಳಲ್ಲಿ ಒಡೆತನದ ಬದಲಾವಣೆಯು ಎನ್ಡಿಟಿವಿಯ ಸಂಪಾದಕೀಯ ನಿಯತ್ತನ್ನು ದುರ್ಬಲಗೊಳಿಸಬಹುದು ಎಂಬ ಕಳವಳಗಳನ್ನು ಸೃಷ್ಟಿಸಿದೆ.

ಎನ್ಡಿಟಿವಿ ಸ್ವಾಧೀನಕ್ಕಷ್ಟೇ ತಾನು ಸೀಮಿತನಾಗಿರುವುದಿಲ್ಲ, ಫೈನಾನ್ಶಿಯಲ್ ಟೈಮ್ಸ್ ಮತ್ತು ಅಲ್ ಜಝೀರಾಗಳ ಪ್ರಭಾವ ಮತ್ತು ಹೆಜ್ಜೆಗುರುತುಗಳಿಗೆ ಸಮನಾದ ಜಾಗತಿಕ ಮಾಧ್ಯಮ ಸಂಸ್ಥೆಯನ್ನು ಬೆಳೆಸುವುದು ತನ್ನ ಉದ್ದೇಶವಾಗಿದೆ ಎಂದೂ ಅದಾನಿ ಸುಳಿವು ನೀಡಿದರು.

ವಿಶ್ವಪ್ರಧಾನ ಕಮರ್ಷಿಯಲ್ ಪ್ರೈ.ಲಿ.ಅನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಂಡ ಬಳಿಕ ಅದಾನಿ ಗ್ರೂಪ್ ಕಳೆದ ಆಗಸ್ಟ್ ನಲ್ಲಿ ಎನ್ಡಿಟಿವಿಯಲ್ಲಿ ಶೇ.29.18ರಷ್ಟು ಹಕ್ಕುಗಳನ್ನು ತಾನು ಹೊಂದಿರುವುದಾಗಿ ಪ್ರತಿಪಾದಿಸಿತ್ತು. ನ.22ರಂದು ಅದು ಇನ್ನೂ ಶೇ.26ರಷ್ಟು ಶೇರುಗಳನ್ನು ಖರೀದಿಸಲು ಶೇರುಗಳ ಸ್ವಾಧೀನಕ್ಕೆ ಸಂಬಂಧಿಸಿದ ಸೆಬಿ ನಿಯಮಾವಳಿಗಳಡಿ ಬಹಿರಂಗ ಆಫರ್ಗೆ ಚಾಲನೆ ನೀಡಿತ್ತು. ಈ ಆಫರ್ ಡಿ.5ರಂದು ಅಂತ್ಯಗೊಳ್ಳಲಿದ್ದು,ಅದಾನಿ ಗ್ರೂಪ್ ಈ ಯೋಜನೆಯಡಿ ಈಗಾಗಲೇ ಒಟ್ಟು ಶೇರುಗಳ ಶೇ.6ಕ್ಕೂ ಅಧಿಕ ಶೇರುಗಳನ್ನು ಖರೀದಿಸಿದೆ.

ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಪ್ರಣಯ್ ರಾಯ್ ಅವರನ್ನು ತಾನು ಆಹ್ವಾನಿಸಿದ್ದೇನೆ ಎಂದು ಹೇಳಿದ ಅದಾನಿ, ತನ್ನ ಉದ್ಯಮ ಸಮೂಹವು ಸರಕಾರದ ಅಭಿವೃದ್ಧಿ ಆದ್ಯತೆಗಳಿಗೆ ನಿಕಟವಾಗಿ ಹೊಂದಿಕೊಂಡಿದೆ ಎಂದು ಘೋಷಿಸಿದರು. 

ಅದಾನಿ ಗ್ರೂಪ್ ಇತರರಿಗಿಂತ ವೇಗವಾಗಿ ತನ್ನ ಜಾಗತಿಕ ಹೆಜ್ಜೆಗುರುತುಗಳನ್ನು ವಿಸ್ತರಿಸುತ್ತಿದೆ. ಇಸ್ರೇಲ್ ಮತ್ತು ಶ್ರೀಲಂಕಾದಲ್ಲಿ ನೂತನ ಬಂದರುಗಳ ನಿರ್ಮಾಣದ ಗುತ್ತಿಗೆಗಳನ್ನು ಅದು ಪಡೆದುಕೊಂಡಿದೆ. ಕಳೆದ ಜುಲೈನಲ್ಲಿ ಗ್ರೂಪ್ ನ ಅದಾನಿ ಪೋರ್ಟ್ಸ್ ಹೈಫಾ ಬಂದರಿಗಾಗಿ 1.2 ಶತಕೋಟಿ ಡಾ.ಗಳ ರಿಯಾಯಿತಿಗಾಗಿ ಇಸ್ರೇಲ್ನ ಗ್ಯಾಡಟ್ ಗ್ರೂಪ್ ಜೊತೆಗೆ ಸಹಭಾಗಿತ್ವವನ್ನು ಮಾಡಿಕೊಂಡಿತ್ತು. ತನ್ನ ಉದ್ಯಮ ಸಮೂಹ ಆಫ್ರಿಕಾದಲ್ಲಿ ಗಣಿಗಾರಿಕೆ ಮತ್ತು ಲೋಹಗಳಲ್ಲಿ ಹೂಡಿಕೆ ಅವಕಾಶಗಳ ಮೌಲ್ಯಮಾಪನ ಮಾಡುತ್ತಿದೆ ಎಂದೂ ಅದಾನಿ ಸಂದರ್ಶನದಲ್ಲಿ ಸುಳಿವು ನೀಡಿದರು. ಪ್ರಭಾವಿ ಜಾಗತಿಕ ಮಾಧ್ಯಮ ಸಂಸ್ಥೆಯನ್ನು ಹೊಂದಿದ್ದರೆ ಅದು ವಿಶ್ವದ ವಿವಿಧ ಭಾಗಗಳಲ್ಲಿ ಎದುರಿಸಿರುವ,ಅನಗತ್ಯ ಮತ್ತು ಅಹಿತಕರ ಎಂದು ಗ್ರೂಪ್ ಭಾವಿಸಿರುವ ಪ್ರತಿಕೂಲ ಟೀಕೆಗಳನ್ನು ಎದುರಿಸಲು ನೆರವಾಗುತ್ತದೆ.

ಇದನ್ನೂ ಓದಿ: ಶಿಕ್ಷಕಿಗೆ ಕಿರುಕುಳ ಆರೋಪ, ನಾಲ್ವರು ವಿದ್ಯಾರ್ಥಿಗಳು ವಶಕ್ಕೆ 

Similar News