ಕೇಜ್ರಿವಾಲ್‍ರನ್ನು ʼ2013ರ ನರೇಂದ್ರ ಮೋದಿʼ ಎಂದು ಬಣ್ಣಿಸಿದ ಅಸದುದ್ದೀನ್‌ ಉವೈಸಿ

Update: 2022-11-28 09:40 GMT

ಹೈದರಾಬಾದ್: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೇಶದ ಎಲ್ಲಾ ಮುಸ್ಲಿಮರಿಗೆ ಅಪಖ್ಯಾತಿ ತಂದಿದ್ದಾರೆ  ಎಂದು ಆರೋಪಿಸಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ, ಕೇಜ್ರಿವಾಲ್ ಅವರನ್ನು 2013 ರ ನರೇಂದ್ರ ಮೋದಿಗೆ ಹೋಲಿಸಿದ್ದಾರೆ.

2020 ರಲ್ಲಿ ದಿಲ್ಲಿಯಲ್ಲಿ ಕೋವಿಡ್ ಹರಡಲು ತಬ್ಲೀಗಿ ಜಮಾತ್ ಕಾರಣ ಎಂದು ಕೇಜ್ರಿವಾಲ್ ಆರೋಪಿಸಿದ್ದರು ಎಂದು ಓವೈಸಿ ಹೇಳಿದ್ದಾರೆ.

ದಿಲ್ಲಿಯ ಸ್ಥಳೀಯಾಡಳಿತ ಚುನಾವಣೆಗಳಿಗೆ ರವಿವಾರ ಪ್ರಚಾರ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಓವೈಸಿ ಮೇಲಿನಂತೆ ಹೇಳಿದ್ದಾರೆ. "ದಿಲ್ಲಿಯ ಕೋವಿಡ್-19 ಪ್ರಕರಣಗಳ ಪಟ್ಟಿಯಲ್ಲಿದ್ದ ಒಂದು ಕಾಲಂನಲ್ಲಿ ತಬ್ಲೀಗಿ ಜಮಾತ್ ಸದಸ್ಯರನ್ನು ಸೂಪರ್ ಸ್ಪ್ರೆಡರ್ಸ್  ಎಂದು ಬಣ್ಣಿಸಲಾಗಿತ್ತು. ಇಡೀ ದೇಶ ಮುಸ್ಲಿಮರನ್ನು ಸಂಶಯದಿಂದ ನೋಡುವಂತಾಯಿತು. ದ್ವೇಷ ಹೆಚ್ಚಾಗಿ ಹಲವರ ಮೇಲೆ ದಾಳಿ ನಡೆಯಿತು. ಇದಕ್ಕೆ ದಿಲ್ಲಿ ಸೀಎಂ ಕಾರಣ," ಎಂದು ಓವೈಸಿ ಹೇಳಿದರು.

ಶಾಹೀನ್‍ಬಾಗ್‍ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ವೇಳೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್ ಅಲ್ಲಿ ಪ್ರತಿಭಟಿಸುತ್ತಿರುವವರನ್ನು ಅರ್ಧ ಗಂಟೆಯಲ್ಲಿ ತೆರವುಗೊಳಿಸಬಲ್ಲೆ ಎಂದು ಹೇಳಿದ್ದರು ಎಂದೂ ಓವೈಸಿ ಉಲ್ಲೇಖಿಸಿದರು.

ದಿಲ್ಲಿಯಲ್ಲಿ 2020 ರಲ್ಲಿ ಹಿಂಸಾಚಾರ ಭುಗಿಲೆದ್ದಾಗ, ಜನರ ಮನೆಗಳನ್ನು ಸುಟ್ಟಾಗ ಹಾಗೂ ಹತ್ಯೆಗಳು ನಡೆದಾಗ ಕೇಜ್ರಿವಾಲ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎಂದು ಹೇಳಿದ ಓವೈಸಿ ಯಾವುದೇ ಪಕ್ಷ ಮುಸ್ಲಿಮರು, ದಲಿತರು ಮತ್ತು ಆದಿವಾಸಿಗಳಿಗಾಗಿ ಕೆಲಸ ಮಾಡಲು ಬಯಸುವುದಿಲ್ಲ ಎಂದು ಆರೋಪಿಸಿದರು.

Similar News