500 ಮಿಲಿಯನ್ ವಾಟ್ಸ್ಯಾಪ್ ಬಳಕೆದಾರರ ಮಾಹಿತಿ ಹ್ಯಾಕ್ ಮಾಡಿ ಮಾರಾಟಕ್ಕಿಟ್ಟ ಅನಾಮಧೇಯರು: ವರದಿ

Update: 2022-11-28 08:33 GMT

ಕ್ಯಾಲಿಫೋರ್ನಿಯಾ: ವಾಟ್ಸ್ಯಾಪ್ ಅನ್ನು ಯಾರೋ ಹ್ಯಾಕ್ ಮಾಡಿ ಸುಮಾರು 500 ಮಿಲಿಯನ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕಳುವುಗೈದಿದ್ದಾರೆಂದು ಸೈಬರ್‌ ನ್ಯೂಸ್ ವರದಿ ಮಾಡಿದೆಯಲ್ಲದೆ ಕಳವುಗೈದ ಡೇಟಾವನ್ನು ಆನ್‍ಲೈನ್‍ನಲ್ಲಿ ಖರೀದಿಗಾಗಿ ಲಭ್ಯಗೊಳಿಸಲಾಗಿದೆ ಎಂದು ತಿಳಿಸಿದೆ.

ಸುಮಾರು 487 ಮಿಲಿಯನ್‍ಗೂ ಅಧಿಕ ವಾಟ್ಸ್ಯಾಪ್ ಬಳಕೆದಾರರ ಡೇಟಾ ಮಾರಾಟ ಕುರಿತಂತೆ ಒಬ್ಬರು ಹ್ಯಾಕಿಂಗ್ ಕಮ್ಯುನಿಟಿ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆನ್ನಲಾಗಿದ್ದು ಈ ಕದ್ದ ಮಾಹಿತಿಯಲ್ಲಿ ವಾಟ್ಸ್ಯಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳು ಒಳಗೊಂಡಿವೆ ಎನ್ನಲಾಗಿದೆ. ಒಟ್ಟು 84 ದೇಶಗಳ ಬಳಕೆದಾರರ ಡೇಟಾ ಇದೆ ಹಾಗೂ ಅಮೆರಿಕಾದ 32 ಮಿಲಿಯನ್ ಬಳಕೆದಾರರ ಡೇಟಾ ಕಳವುಗೈಯ್ಯಲಾಗಿದೆ ಎಂದು ವರದಿಯಾಗಿದೆ.

ಅಮೆರಿಕಾ ಹೊರತಾಗಿ ಈಜಿಪ್ಟ್, ಇಟಲಿ, ಸೌದಿ ಅರೇಬಿಯಾ, ಪ್ರಾನ್ಸ್ ಮತ್ತು ಟರ್ಕಿ ದೇಶಗಳ ಬಳಕೆದಾರರ ಡೇಟಾ ಕೂಡ ಸೋರಿಕೆಯಾಗಿದೆ ಎಂಬ ಮಾಹಿತಿಯಿದೆ. ಆದರೆ ಕುತೂಹಲಕಾರಿಯೆಂದರೆ ಈ ಪಟ್ಟಿಯಲ್ಲಿ ಭಾರತೀಯ ಬಳಕೆದಾರರ ಡೇಟಾ ಇಲ್ಲ.  ಅಮೆರಿಕಾದ ವಾಟ್ಸ್ಯಾಪ್ ಬಳಕೆದಾರರ ಡೇಟಾ 7000 ಡಾಲರ್‍ಗೆ ಮಾರಾಟಕ್ಕಿಡಲಾಗಿದ್ದರೆ, ಇಂಗ್ಲೆಂಡ್ ಮತ್ತು ಜರ್ಮನಿಯ ವಾಟ್ಸ್ಯಾಪ್ ಬಳಕೆದಾರರ ಡೇಟಾಬೇಸ್ ತಲಾ ರೂ 2500 ಡಾಲರ್ ಹಾಗೂ 2000 ಡಾಲರ್‍ಗೆ ಮಾರಾಟಕ್ಕಿಡಲಾಗಿದೆ.

ಮಾರಾಟಕ್ಕಿಡಲಾದ ಡೇಟಾದ ಸ್ಯಾಂಪಲ್ ಅನ್ನು ಸೈಬರ್‍ನ್ಯೂಸ್ ಸುದ್ದಿ ಸಂಸ್ಥೆ ಕೇಳಿದಾಗ ಅಮೆರಿಕಾದ 817 ಬಳಕೆದಾರರ ಹಾಗೂ ಇಂಗ್ಲೆಂಡ್‍ನ 817 ಬಳಕೆದಾರರ ಫೋನ್ ಸಂಖ್ಯೆ ಇರುವ ಡೇಟಾವನ್ನು ಹ್ಯಾಕರ್ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಸೋರಿಕೆಯಾದ ಮೊಬೈಲ್ ಸಂಖ್ಯೆಗಳನ್ನು ಫಿಶಿಂಗ್ ಮತ್ತು ವಂಚನೆ ಚಟುವಟಿಕೆಗಳಿಗೆ ಬಳಸುವ ಭೀತಿಯಿದೆ.

Similar News