ಕೊಲೀಜಿಯಂ ಶಿಫಾರಸುಗಳನ್ನು ಅನುಮೋದಿಸುವಲ್ಲಿ ಕೇಂದ್ರದ ವಿಳಂಬದ ಬಗ್ಗೆ ಅಸಮಾಧಾನ ಹೊರಹಾಕಿದ ಸುಪ್ರೀಂ ಕೋರ್ಟ್

Update: 2022-11-28 10:48 GMT

ಹೊಸದಿಲ್ಲಿ: ನ್ಯಾಯಾಧೀಶರುಗಳ ನೇಮಕಾತಿ ಕುರಿತಂತೆ ಕೊಲೀಜಿಯಂ ಮಾಡಿದ ಶಿಫಾರಸುಗಳ ಕುರಿತಂತೆ ತನ್ನ ನಿರ್ಧಾರ ಪ್ರಕಟಿಸಲು ಕೇಂದ್ರ ಸರಕಾರದ ವಿಳಂಬ ನೀತಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ಕಟುವಾಗಿ ಟೀಕಿಸಿದೆ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಜಾರಿಯಾಗಿಲ್ಲವೆಂಬ ಅಸಮಾಧಾನದಿಂದಾಗಿ  ಕೊಲೀಜಿಯಂ ಶಿಫಾರಸುಗಳನ್ನು ತಡೆಹಿಡಿಯಲಾಗಿದೆಯೇ ಎಂಬ ಸಂದೇಹವನ್ನು ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದ ಜಸ್ಟಿಸ್ ಸಂಜಯ್ ಕಿಶನ್ ಕೌಲ್ ವ್ಯಕ್ತಪಡಿಸಿದರು.

"ವಿಷಯವೇನೆಂದರೆ ಹೆಸರುಗಳನ್ನು ಅನುಮೋದಿಸಲಾಗುತ್ತಿಲ್ಲ. ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ. ನಾವು ನಮ್ಮ ಅಸಮಾಧಾನ ವ್ಯಕ್ತಪಡಿಸಿದ್ದೇವೆ. ಎನ್‍ಜೆಎಸಿ ಜಾರಿಯಾಗಿಲ್ಲದೇ ಇರುವುದು ಸರಕಾರದ ಅಸಂತುಷ್ಟಕ್ಕೆ ಕಾರಣವಾಗಿದೆ. ಹೆಸರುಗಳನ್ನು ಅನುಮೋದಿಸದೇ ಇರುವುದಕ್ಕೆ ಇದು ಕಾರಣವಾಗಿರಬಹುದೇ?'' ಎಂದು ಜಸ್ಟಿಸ್ ಕಿಶನ್ ಕೌಲ್ ಪ್ರಶ್ನಿಸಿದರು.

"ಕೊಲೀಜಿಯಂ ಕುರಿತು ಕೆಲವರಿಗೆ ಅಸಮಾಧಾನವಿರಬಹುದು. ಆದರೆ ಅದು ಇರುವ ತನಕ ಅದು ನೆಲದ ಕಾನೂನಾಗಿದೆ.,'' ಎಂದು ಅವರು ಹೇಳಿದರು.

'ಟೈಮ್ಸ್ ನೌ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಕೇಂದ್ರ ಕಾನೂನು ಸಚಿವ ಕಿರೆಣ್ ರಿಜಿಜು ಅವರು ಕೊಲೀಜಿಯಂ ವ್ಯವಸ್ಥೆಯನ್ನು ಟೀಕಿಸಿದ್ದರಲ್ಲದೆ ಇದು ಭಾರತದ ಸಂವಿಧಾನಕ್ಕೆ ಪರಕೀಯವಾಗಿದೆ ಹಾಗೂ ದೇಶದ ಜನರ ಬೆಂಬಲ ಅದಕ್ಕಿಲ್ಲ ಮತ್ತು ಕೊಲೀಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಕೇವಲ ಅನುಮೋದಿಸಬೇಕೆಂದು ಸರಕಾರದಿಂದ ನಿರೀಕ್ಷಿಸುವಂತಿಲ್ಲ" ಎಂದಿದ್ದರು.

"ಸರಕಾರ ಫೈಲ್‍ಗಳನ್ನು ಇಟ್ಟುಕೊಂಡು ಕುಳಿತಿದೆ ಎಂದು ಹೇಳಬೇಡಿ, ಹಾಗಿದ್ದರೆ ಫೈಲ್‍ಗಳನ್ನು ಕಳುಹಿಸಬೇಡಿ, ನೀವೇ ನೇಮಕ ಮಾಡಿ,'' ಎಂದು ಸಚಿವರು ಹೇಳಿರುವ ಬಗ್ಗೆ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಪೀಠದ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಜಸ್ಟಿಸ್ ಕೌಲ್, "ದೊಡ್ಡ ಹುದ್ದೆಯಲ್ಲಿರುವವರು ಹೀಗೆ ಹೇಳಿದ್ದಾರೆ. ಹಾಗಾಗಬಾರದಾಗಿತ್ತು. ಹಲವು ಮಾಧ್ಯಮ ವರದಿಗಳನ್ನು ನಿರ್ಲಕ್ಷ್ಯಿಸಿದ್ದೇನೆ ಆದರೆ ಈ ಮಾತುಗಳು ಉನ್ನತ ಹುದ್ದೆಯಲ್ಲಿರುವವರಿಂದ ಬಂದಿದೆ,'' ಎಂದು ಹೇಳಿದರು.

ನ್ಯಾಯಾಲಯದ ಅಸಮಾಧಾನದ ಕುರಿತಂತೆ ಸರಕಾರಕ್ಕೆ ತಿಳಿಸುವಂತೆ ಜಸ್ಟಿಸ್ ಕೌಲ್ ಅವರು ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿದರು.

ಮುಂದಿನ ವಿಚಾರಣೆ ಡಿಸೆಂಬರ್ 8ಕ್ಕೆ ನಿಗದಿಯಾಗಿದೆ.

Similar News