ತಬ್ಲೀಗಿ ಜಮಾಅತ್ ಮುಖ್ಯ ಕಾರ್ಯಾಲಯದ ಕೀಲಿಗಳನ್ನು ವಾಪಸ್ ಹಸ್ತಾಂತರಿಸಿ: ದಿಲ್ಲಿ ಪೊಲೀಸರಿಗೆ ಹೈಕೋರ್ಟ್ ಸೂಚನೆ

Update: 2022-11-28 12:20 GMT

ಹೊಸದಿಲ್ಲಿ: ರಾಜಧಾನಿಯ ನಿಝಾಮುದ್ದೀನ್‍ನಲ್ಲಿರುವ (Nizamuddin) ತಬ್ಲೀಗಿ ಜಮಾಅತ್ (Tablighi Jamaat) ಮುಖ್ಯ ಕಾರ್ಯಾಲಯದ ಕೀಲಿಗಳನ್ನು ಮೌಲಾನಾ ಸಾದ್ (Maulana Saad) ಅವರಿಗೆ ಹಸ್ತಾಂತರಿಸುವಂತೆ ದಿಲ್ಲಿ ಹೈಕೋರ್ಟ್ ಇಂದು ಪೊಲಿಸರಿಗೆ ಆದೇಶಿಸಿದೆ. ತಬ್ಲೀಗಿ ಜಮಾಅತ್ ಮುಖ್ಯ ಕಾರ್ಯಾಲಯದ ಮೇಲೆ ನಿರ್ಬಂಧಗಳನ್ನು ಮುಂದುವರಿಸುವ ಕುರಿತ ದಿಲ್ಲಿ ಪೊಲೀಸರ ನಿಲುವನ್ನು ನ್ಯಾಯಾಲಯ ತಿರಸ್ಕರಿಸಿದೆ.

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನ್ಯಾಯಾಲಯವು ಕಟ್ಟಡದ  ಐದು ಅಂತಸ್ತುಗಳಲ್ಲಿ ರಮಝಾನ್ ತಿಂಗಳಿನಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಿತ್ತು. ನಂತರ ಮೇ ತಿಂಗಳಿನಲ್ಲಿ ಸಾರ್ವಜನಿಕರಿಗೆ ಕಟ್ಟಡಕ್ಕೆ ಪ್ರವೇಶಿಸಲು ಅನುಮತಿ ನೀಡಿದ್ದರೂ ಪ್ರಾರ್ಥನೆ ಉದ್ದೇಶಕ್ಕೆ ಅದು ಸೀಮಿತವಾಗಿತ್ತು. ಆದರೆ ಕಟ್ಟಡಕ್ಕೆ ಸಂಯೋಜಿತವಾಗಿರುವ ಮದರಸಾ ಮತ್ತು ಹಾಸ್ಟೆಲ್ ಕಟ್ಟಡ ಮಾರ್ಚ್ 2020 ರಿಂದ ಮುಚ್ಚಲ್ಪಟ್ಟಿತ್ತು.

ಯಾರಿಂದ ಮುಖ್ಯ ಕಾರ್ಯಾಲಯದ ಕೀಲಿಗಳನ್ನು ಪಡೆಯಲಾಗಿತ್ತೋ ಅವರಿಗೇ ಅದನ್ನು ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ಹೇಳಿದೆ. "ಕಟ್ಟಡವನ್ನು ಇನ್ನೂ ನಿಮ್ಮ ವಶದಲ್ಲಿರಿಸಿಕೊಂಡಿದ್ದೀರಾ? ಯಾವ  ಸಾಮರ್ಥ್ಯದಲ್ಲಿ, ಸಾಂಕ್ರಾಮಿಕ ಕಾಯಿಲೆಗಳ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು, ಆದರೆ ಈಗ ಅದು ಮುಗಿದಿದೆ,'' ಎಂದು  ನ್ಯಾಯಾಲಯ ಹೇಳಿತು.

ಮರ್ಕಝ್ ಕಾರ್ಯಾಲಯದ ಕೀಲಿಗಳನ್ನು ಮೌಲಾನ ಸಾದ್ ಅವರಿಂದ ಪಡೆಯಲಾಗಿತ್ತು, ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲಿಸರು ತಿಳಿಸಿದಾಗ,  ಮರ್ಕಝ್ ಆಡಳಿತದ ಪರ ವಕೀಲರು ಪ್ರತಿಕ್ರಿಯಿಸಿ ಸಾದ್ ಅವರು ನಿಝಾಮುದ್ದೀನ್‍ನಲ್ಲಿದ್ದಾರೆ ಹಾಗೂ ಅವರು ತಲೆಮರೆಸಿಕೊಂಡಿಲ್ಲ ಎಂದರು.

ಮರ್ಕಝ್ ಆಡಳಿತ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಮರ್ಕಝ್ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ದಿಲ್ಲಿ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಮೇಲಿನ ಆದೇಶ ಹೊರಡಿಸಲಾಗಿದೆ.

Similar News